Share this news

ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದೀಗ ಜನರಿಗೆ ನೀಡಿದ ಉಚಿತ ಕೊಡುಗೆಗಳ ಭರವಸೆಗಳನ್ನು ಈಡೇರಿಸುವುದಕ್ಕೆ ರೂಪುರೇಷೆಗಳನ್ನು ಸಿದ್ದಪಡಿಸುತ್ತಿದೆ.ಚುನಾವಣೆ ಸಂದರ್ಭದಲ್ಲಿ ರಾಜ್ಯದ ಎಲ್ಲಾ ವರ್ಗದ ಜನರಿಗೂ 5 ಗ್ಯಾರಂಟಿಗಳು ಉಚಿತ ಎಂದಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿಗಳು ದುಬಾರಿಯಾಗುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ.

ಗ್ಯಾರಂಟಿಗಳಿಗೆ ಕೆಲವೊಂದು ಮಾನದಂಡಗಳನ್ನು ವಿಧಿಸುವ ಮೂಲಕ ಉಡುಗೊರೆಗಳಿಗೆ ಕತ್ತರಿ ಪ್ರಯೋಗ ನಡೆಸಲು ಮುಂದಾಗಿರುವ ಕಾಂಗ್ರೆಸ್ ಕೊಡುಗೆಗಳನ್ನು ಬಡ ವರ್ಗದ ಜನರಿಗೆ ಮಾತ್ರ ಸೀಮಿತಗೊಳಿಸುವ ಎಲ್ಲ ಸಾಧ್ಯತೆ ಕಂಡುಬರುತ್ತಿದೆ.ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಈ ಉಚಿತ ಕೊಡುಗೆಗಳ ಲಾಭ ಪಡೆಯಲು ಉತ್ಸುಕರಾಗಿರುವ ಜನರು, ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಳ್ಳಲು ಮುಗಿಬಿದ್ದಿದ್ದಾರೆ

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ., ನಿರುದ್ಯೋಗಿ ಯುವ ಪದವೀಧರರಿಗೆ ಧನಸಹಾಯ, ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ಉಚಿತ.ಡಿಪ್ಲೊಮಾ ಕೋರ್ಸ್ ಪಡೆದವರಿಗೆ 1,500 ಸಾವಿರ ಧನಸಹಾಯ ಹೀಗೆ 6 ಗ್ಯಾರಂಟಿಗಳನ್ನು ಕಾಂಗ್ರೆಸ್ ನೀಡಿದೆ. ಇವುಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸುವುದು ಕಾಂಗ್ರೆಸ್ ಸರ್ಕಾರದ ಬದ್ದತೆ ಎಂದು ಸ್ಪಷ್ಟಪಡಿಸಿತ್ತು.
ಇದಕ್ಕೆ ಪೂರಕವಾಗಿ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮೊದಲ ಸಚಿವ ಸಂಪುಟ ಸಭೆಯಲ್ಲೇ ತಾತ್ವಿಕ ಒಪ್ಪಿಗೆ ನೀಡುವ ನಿರ್ಧಾರಗಳನ್ನು ಕೈಗೊಂಡು ಅಧಿಕೃತ ಆದೇಶಗಳನ್ನೂ ಹೊರಡಿಸಿದ್ದಾರೆ. ಆದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತ್ರ, ಹಾದಿಬೀದಿಯಲ್ಲಿ ಹೋಗುವವರಿಗೆಲ್ಲ ಈ ಯೋಜನೆಗಳ ಲಾಭ ಸಿಗುವುದಿಲ್ಲ, ನಿಜಕ್ಕೂ ಬಡವರಿಗೆ ಅರ್ಹರಿಗೆ ಮಾತ್ರ ಸಿಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೆಲ್ಲವನ್ನೂ ಗಮನಿಸಿರುವ ಸಾರ್ವಜನಿಕರು ತಮ್ಮ ಹೆಸರಿನಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಳ್ಳಲು ಆಹಾರ, ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ಸರಬರಾಜು ಇಲಾಖೆಯ ವೆಬ್‌ಸೈಟ್‌ಗೆ ಮೊರೆ ಹೋಗಿದ್ದಾರೆ. ಕೆಲವರು ತಮ್ಮ ಮೊಬೈಲ್ ಮತ್ತು ಕಂಪ್ಯೂಟರ್‌ಗಳ ಸಹಾಯದಿಂದ ಆಹಾರ ಇಲಾಖೆಯ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿದರೆ ಇನ್ನುಳಿದವರು ಸೈಬರ್ ಸೆಂಟರ್‌ಗಳಿಗೆ ಹೋಗಿ ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಹೆಚ್ಚು ಜನ ಒಂದೇ ಸಲಕ್ಕೆ ಪ್ರಯತ್ನ ಮಾಡುತ್ತಿರುವುದರಿಂದ ವೆಬ್‌ಸೈಟ್ ನಿಧಾನವಾಗಿದೆ. ಕೆಲವೆಡೆ ಓಪನ್ ಕೂಡ ಆಗುತ್ತಿಲ್ಲ.


ಈ ಸಮಸ್ಯೆಯನ್ನು ಮನಗಂಡ ಆಹಾರ ಇಲಾಖೆಯವರು ಹೊಸ ಪಡಿತರ ಚೀಟಿ ನೀಡುವ ಪ್ರಕ್ರಿಯೆಯನ್ನೇ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಹೊಸ ಪಡಿತರ ಚೀಟಿಗಾಗಿ ಅರ್ಜಿ ಸ್ವೀಕರಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಮ್ಮ ವೆಬ್‌ಸೈಟ್‌ನಲ್ಲೇ ಸ್ಪಷ್ಟವಾಗಿ ನಮೂದಿಸಿಬಿಟ್ಟಿದ್ದಾರೆ. ಇದರಿಂದಾಗಿ ನೂತನ ಸರ್ಕಾರದ ಉಚಿತ ಕೊಡುಗೆಗಳ ಲಾಭ ಪಡೆಯುವ ಸಲುವಾಗಿ ಹೊಸದಾಗಿ ಬಿಪಿಎಲ್ ಕಾರ್ಡ್ ಮಾಡಿಸಲು ಹೊರಟಿದ್ದ ಜನರಿಗೆ ನಿರಾಸೆಯಾಗಿದೆ.
ರಾಜ್ಯದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕು ಎಂದಿದ್ದ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಜನರಿಗೆ ಉಚಿತ ಕೊಡುಗೆಗಳ ಗ್ಯಾರಂಟಿ ನೀಡಿ ಸದ್ದಿಲ್ಲದೇ ಮತದಾರರ ಮೂಗಿಗೆ ತುಪ್ಪ ಸವರಿದೆ. ಕಾಂಗ್ರೆಸ್ ಗ್ಯಾರಂಟಿಗಳಿಗೆ ಮನಸೋತ ಮತದಾರರು ಕಾಂಗ್ರೆಸ್ ಗೆ ಅಧಿಕಾರ ಕೊಟ್ಟು ಇದೀಗ ಗ್ಯಾರಂಟಿಗಳ ಲಾಭ ಪಡೆಯಲು ಜನರು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *