ಬೆಂಗಳೂರು : ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಉಚಿತ ವಿದ್ಯುತ್ ಗೆ ಷರತ್ತು ಹೇರಿರುವುದನ್ನು ವಿರೋಧಿಸಿ ಇಂದು ಮತ್ತು ನಾಳೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಎಂದಿದ್ದ ಕಾಂಗ್ರೆಸ್ ಪಕ್ಷ ಈಗ ಷರತ್ತು ವಿಧಿಸಿರುವುದು, ವಿದ್ಯುತ್ ಶುಲ್ಕ ವಿಧಿಸಿರುವುದು ಹಾಗೂ ಹಾಲಿನ ಪ್ರೋತ್ಸಾಹಧನ ಕಡಿತ ಮಾಡಿರುವ ನಿರ್ಧಾರಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಸೋಮವಾರ ಹಾಗೂ ಮಂಗಳವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಹೇಳಿತ್ತು. ಆದರೆ ಈಗ ಉಚಿತ ವಿದ್ಯುತ್ ಗೆ ಷರತ್ತು ವಿಧಿಸಿದೆ. ಏಕಾಏಕಿ ಗೃಹ ಬಳಕೆಯ ವಿದ್ಯುತ್ ದರವನ್ನು ಹೆಚ್ಚಿಸಿದ್ದನ್ನು ವಿರೋಧಿಸಿ ಇಂದು ಮತ್ತು ನಾಳೆ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದ್ದಾರೆ.