ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಕ್ತಿ ಯೋಜನೆಯನ್ನು ಸಂತೋಷವಾಗಿ ಉದ್ಘಾಟಿಸಿದ್ದೇವೆ. ಶಕ್ತಿ ಯೋಜನೆ ಮಹಿಳೆಯರಿಗೆ ಮಾಡಿರುವ ಕಾರ್ಯಕ್ರಮ.ಮಹಿಳೆಯರು ಶತಮಾನಗಳಿಂದ ಅವಕಾಶಗಳಿಂದ ವಂಚಿತರಾಗಿದ್ದಾರೆ. ಮಹಿಳೆಯರು ಸಮಾಜದಲ್ಲಿ ಸದೃಢವಾಗಿ ನಿಲ್ಲಲು ಮಾಡಿದ ಯೋಜನೆಯಾಗಿದೆ ಎಂದರು.ಸಾಮಾಜಿಕ ಆರ್ಥಿಕ ಅಸಮಾನತೆಗೆ ಮಹಿಳೆಯರು ಒಳಗಾಗಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಹೆಚ್ಚು ಭಾಗಿಯಾಗಬೇಕು. ಮಹಿಳೆಯರು ಹೆಚ್ಚು ಭಾಗಿಯಾದ್ರೆ ದೇಶ ಪ್ರಗತಿಯತ್ತ ಸಾಗುತ್ತದೆ. 5 ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿಗಳು ಮಹಿಳೆಯರಿಗೆ ಅನುಕೂಲವಾಗಿವೆ ಎಂದು ಹೇಳಿದ್ದಾರೆ.
ಗ್ಯಾರಂಟಿಗಳ ಕುರಿತ ವಿಪಕ್ಷಗಳ ಟೀಕೆಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಜುಲೈ 1 ರಿಂದ ಗೃಹಜ್ಯೋತಿ ಯೋಜನೆ ಜಾರಿ ಮಾಡುತ್ತೇವೆ. ಸುಮ್ಮನೆ ಗೇಲಿ ಮಾಡುವವರು ಮನುಸ್ಮೃತಿ ಮನಸ್ಥಿತಿಯವರು. ಗೇಲಿ ಮಾಡುವವರ ಮಾತಿಗೆ ಸೊಪ್ಪು ಹಾಕಲ್ಲ ಎಂದರು.
ಶಕ್ತಿ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶಕ್ತಿ ಯೋಜನೆಯ ಲಾಂಛನ (ಲೋಗೋ) ಹಾಗೂ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದ್ದಾರೆ. ಬಳಿಕ ಐವರು ಮಹಿಳೆಯರಿಗೆ ಸಾಂಕೇತಿಕವಾಗಿ ಶಕ್ತಿಯೋಜನೆಯ ಸ್ಮಾರ್ಟ್ ಕಾರ್ಡ್ ವಿತರಿಸಿದರು.
ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ 5 ಗ್ಯಾರಂಟಿ ಕೊಟ್ಟಿದ್ದೆವು. ಅದರಲ್ಲಿ ಮೊದಲ ಗ್ಯಾರಂಟಿ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದೇವೆ, ರಾಜ್ಯದ ಜನತೆ ನಮ್ಮ ಮೇಲೆ ನಂಬಿಕೆಯಿಟ್ಟು ಗೆಲ್ಲಿಸಿದ್ದಾರೆ. ಜನರ ಭರವಸೆಗಳನ್ನು ನಾವು ಈಡೇರಿಸುತ್ತೇವೆ. ಕೇಂದ್ರದಲ್ಲಿ ಬಲಿಷ್ಠ ಸರ್ಕಾರ ಇದ್ರೂ ನಾವು ರಾಜ್ಯದಲ್ಲಿ ಗೆಲುವು ಸಾಧಿಸಿದ್ದೇವೆ. ಶಕ್ತಿ ಯೋಜನೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಮಾತ್ರ ಅಲ್ಲಾ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಬಸವಣ್ಣನವರ ನಾಡಿನಲ್ಲಿ ನಾವು ಬದುಕಿದ್ದೇವೆ.ನಾವು ನಮ್ಮ ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು. ನಾವು ಭ್ರಷ್ಟಾಚಾರರಹಿತ ಪರಿಶುದ್ಧ ಆಡಳಿತ ಕೊಡಲು ಪ್ರಯತ್ನಿಸುತ್ತೇವೆ. ಶಕ್ತಿ ಯೋಜನೆ ಬಗ್ಗೆ ಅರ್ಥ ಪೂರ್ಣವಾಗಿ ನಮ್ಮ ನಾಯಕರು ಸೇರಿಕೊಂಡು ಚರ್ಚೆ ಮಾಡಿ ಜಾರಿಗೆ ತಂದಿದ್ದೇವೆ, ಬಿಜೆಪಿ, ಜೆಡಿಎಸ್ ನವರು ಟೀಕೆ ಮಾಡಲಿ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ.ನಾವು ಅಭಿವೃದ್ಧಿ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳುತ್ತೇವೆ ಎಂದರು.
ಶಕ್ತಿ ಯೋಜನೆಯನ್ನು ಇಂದು ಮಧ್ಯಾಹ್ನ 01 ಗಂಟೆಯಿAದ ಅನ್ವಯವಾಗುವಂತೆ ಜಾರಿಗೊಳಿಸಲಾಗುತ್ತಿದೆ. ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ಸರ್ಕಾರ ನೀಡಿರುವ ಯಾವುದಾದರೊಂದು ಗುರುತಿನ ಚೀಟಿ ಅಥವಾ ದಾಖಲಾತಿಗಳನ್ನು ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.