Share this news

ಶಿವಮೊಗ್ಗ: ಬಿಜೆಪಿಯಲ್ಲಿ ಹಲವು ವರ್ಷಗಳ ಕಾಲ ರಾಜಕಾರಣ ಮಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಟಿಕೆಟ್ ಕೈ ತಪ್ಪುವ ವಿಚಾರದಲ್ಲಿ ಬಂಡಾಯವೆದ್ದು, ಕಾಂಗ್ರೆಸ್ ಪಕ್ಷ ಸೇರಿದ್ದರು. ಅವರ ಈ ನಡೆಯ ಬಗ್ಗೆ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಎರಡು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. 

ಅದರಲ್ಲಿ ದಶಕಗಳಿಗೂ ಹೆಚ್ಚಿನ ಕಾಲ ತಾವು ನಂಬಿ ತಮ್ಮ ರಾಜಕೀಯ ಜೀವನವನ್ನು ರೂಪಿಸಿಕೊಂಡಿದ್ದ ತತ್ವ, ಸಿದ್ಧಾಂತ, ರಾಜಕೀಯ ನಿವುವನ್ನು ತ್ಯಜಿಸಿ, ಕಾಂಗ್ರೆಸ್ ಪಕ್ಷದ ಕಡೆ ಮುಖ ಮಾಡಿರುವ ಈ ಬದಲಾದ ಪರಿಸ್ಥಿತಿಯಲ್ಲಿ ನನಗೆ ನಿಮ್ಮ ತಂದೆಯಾದ ದಿ.ಶಿವಪ್ಪ ಶೆಟ್ಟರು ಬಹಳವಾಗಿ ನೆನಪಾಗುತ್ತಿದ್ದಾರೆ ಎಂದಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಟ್ಟ ಪ್ರಭಾವದಲ್ಲಿ ತಮ್ಮ ರಾಜಕೀಯ ಜೀವನ ರೂಪಿಸಿಕೊಂಡ ದಿ.ಶಿವಪ್ಪ ಶೆಟ್ಟರು, ಬಿಜೆಪಿಯ ಮೂಲಕ ನಗರ ಸಭೆಯ ಸದಸ್ಯರಾಗಿ, ಮಹಾಪೌರರಾಗಿ, ಶಾಸಕರಾಗಿ ಎಲ್ಲದಕ್ಕಿಂತ ಮಿಗಿಲಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು .

ತಂದೆಯ ಪ್ರಭಾವದಲ್ಲಿ ಬೆಳೆದ ತಾವು ಸಹ ರಾಷ್ಟ್ರೀಯತೆಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡವರು. ಕಾಂಗ್ರೆಸ್ ಪಕ್ಷದ ದೇಶ ವಿರೋಧಿ ಧೋರಣೆಗಳನ್ನು ಸದಾ ಖಂಡಿಸುತ್ತಾ ಬಂದವರು. ಬಿಜೆಪಿ ಮೂಲಕ ಅನೇಕ ಬಾರಿ ಶಾಸಕರಾಗಿ ಚುನಾಯಿತರಾಗಿದ್ದು, ಮಾತ್ರವಲ್ಲದೇ ರಾಜ್ಯದ ಮುಖ್ಯಮಂತ್ರಿಯಾಗುವಷ್ಟು ಎತ್ತರಕ್ಕೆ ಬೆಳೆದಿರಿ ಎಂದು ತಿಳಿಸಿದ್ದಾರೆ.

ಪ್ರಸಕ್ತ ಸಂದರ್ಭದಲ್ಲಿ ತಾಯಿಯಂತೆ ಕಾಪಾಡಿದ ಪಕ್ಷ ತೆಗೆದುಕೊಂಡ ನಿರ್ಣಯದ ವಿರುದ್ಧ ಅಸಮಾಧಾನಗೊಂಡಿರುವ ತಮ್ಮ ಮನಸ್ಥಿತಿ ನನಗೆ ಅರ್ಥವಾಗುತ್ತದೆ. ಆದರೇ ಪಕ್ಷವನ್ನು ಬಿಟ್ಟು ನಂಬಿದ ಎಲ್ಲಾ ಆದರ್ಶಗಳನ್ನು ತೊರೆದು ನಮ್ಮ ಪಕ್ಷದ ಚಿಂತನೆಗೆ ವಿರುದ್ಧವಾದ ಕಾಂಗ್ರೆಸ್ ಪಕ್ಷಕ್ಕೆ ತಾವು ಸೇರಲು ಬಯಸಿರುವುದು ಮಾತ್ರ ಅತ್ಯಂತ ದುರದೃಷ್ಠಕರ ಎಂದು ಹೇಳಿದ್ದಾರೆ.

ಮುಂದೆ ಒಂದು ದಿನ ತಾವು ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದ ಸಂದರ್ಭದಲ್ಲಿ ಸದನದಲ್ಲಿ ಗೋ ಹತ್ಯೆ ಪರ-ವಿರೋಧದ ಚರ್ಚೆ ನಡೆದರೇ ತಾವು ಗೋ ಹತ್ಯೆ ಸಂರ್ಥಿಸಲು ಸಾಧ್ಯವೇ.? ಉಗ್ರ ಪಿಎಫ್ಐ ಸಂಘಟನೆ ಕುರಿತಾದ ಪರ-ವಿರೋಧದ ಚರ್ಚೆಯಲ್ಲಿ ಪಿಎಫ್ಐ ನಿರ್ಬಂಧ ತೆರವು ಮಾಡಲು ತಾವು ಸಮ್ಮತಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲು ವಿರೋಧ ವ್ಯಕ್ತ ಪಡಿಸಿದ ಕಾಂಗ್ರೆಸ್ ಪಕ್ಷದ ವಿರುದ್ಧ ಉಗ್ರ ಹೋರಾಟ ನನಗಿನ್ನೂ ಮನಸ್ಸಿನಲ್ಲಿ ಹಸಿರಾಗಿದೆ. ಈಗ ತಾವು ಅದೇ ಪಕ್ಷವನ್ನು ಯಾವ ರೀತಿ ಒಪ್ಪಿಕೊಳ್ಳಲು ಸಾಧ್ಯ? ನಾವು ನಂಬಿ, ಪ್ರತಿಪಾದಿಸುತ್ತಾ ಬಂದಿರುವ ಎಲ್ಲಾ ತತ್ವ, ಆದರ್ಶಗಳ ವಿರುದ್ಧ ಕೆಲಸ ಮಾಡುವ ಕಾಂಗ್ರೆಸ್ ಪಕ್ಷದೊಂದಿಗೆ ಕೆಲಸ ಮಾಡುವುದು ಹೇಗೆ ಸಾಧ್ಯ ಎಂದು ಯೋಚಿಸುವಂತೆ ಹೇಳಿದ್ದಾರೆ.

ಕೇವಲ ಈ ಬಾರಿಯ ಚುನಾವಣೆಯಲ್ಲಿ ತಮಗೆ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಲಿಲ್ಲವೆಂಬ ಕಾರಣವನ್ನು ಮುಂದಿಟ್ಟುಕೊಂಡು ಪಕ್ಷ ತೊರೆಯುವ ಮಹತ್ವದ ನಿರ್ಧಾರ ಮಾಡುವ ಮುನ್ನ ಪಕ್ಷ ತಮಗೆ ಈ ಹಿಂದೆ ನೀಡಿದ ಸ್ಥಾನ, ಮಾನಗಳ ಕುರಿತು ಒಮ್ಮೆ ಅವಲೋಕಿಸಬೇಕೆಂದು ಕೋರಿದ್ದಾರೆ.

Leave a Reply

Your email address will not be published. Required fields are marked *