ಕಾರ್ಕಳ: ನಿವೇಶನರಹಿತರಿಗೆ ಹಕ್ಕುಪತ್ರ ನೀಡುವಲ್ಲಿ ತೊಡಕಾಗಿದ್ದ ಡೀಮ್ಡ್ ಅರಣ್ಯ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡ ಪರಿಣಾಮ ಕಾರ್ಕಳ ವಿಧಾನಸಭಾ ಕ್ಷೇತ್ರದ ಸಾವಿರಕ್ಕೂ ಮಿಕ್ಕಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಹೇಳಿದರು
ಅವರು ಶನಿವಾರ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕಂದಾಯ ಇಲಾಖೆ ವತಿಯಿಂದ ನಿವೇಶನರಹಿತರಿಗೆ 94c ಹಾಗೂ 94 cc ಅಡಿಯಲ್ಲಿ ಒಟ್ಟು 125 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಡೀಮ್ಡ್ ಅರಣ್ಯ ಸಮಸ್ಯೆಯಿಂದ ಜನರ ಸ್ವಂತ ಸೂರಿನ ಕನಸಿಗೆ ಅಡ್ಡಿಯಾಗಬಾರದು ಎನ್ನುವುದು ನಮ್ಮ ಸರ್ಕಾರದ ಉದ್ದೇಶವಾಗಿತ್ತು, ಈ ಹಿಂದಿನ ಚುನಾವಣೆಯಲ್ಲಿ ನಾವು ನೀಡಿದ ಭರವಸೆ ಈಡೇರಿಸಲು ಸಾಧ್ಯವಾಗಿದೆ.ವಿಧಾನಸಭಾ ಕ್ಷೇತ್ರದ 34 ಪಂಚಾಯಿತಿಗಳಲ್ಲಿನ ನಿವೇಶನ ರಹಿತರಿಗೆ ಯಾವುದೇ ತಾರತಮ್ಯ ಮಾಡದೇ ನಿವೇಶನ ಹಕ್ಕುಪತ್ರ ವಿತರಿಸಲಾಗಿದೆ. ಇದರಿಂದ ಹಲವಾರು ವರ್ಷಗಳಿಂದ ಸ್ವಂತ ನಿವೇಶನ ಕನಸು ನನಸಾದಂತಾಗಿದೆ ಎಂದರು. ನಿವೇಶನ ಪಡೆದವರು ಆದಷ್ಟು ಬೇಗ ಮನೆ ಕಟ್ಟುವಂತಾಗಲಿ ಹಾಗೂ ನಿಮ್ಮ ಗೃಹಪ್ರವೇಶದ ಸಂಭ್ರಮದಲ್ಲಿ ನನ್ನನ್ನೂ ಆಹ್ವಾನಿಸಿ ಎಂದರು.
ಈ ಸಂದರ್ಭದಲ್ಲಿ ಕಾರ್ಕಳ ಪುರಸಭೆ ಉಪಾಧ್ಯಕ್ಷೆ ಪಲ್ಲವಿ,ಮಿಯ್ಯಾರು ಗ್ರಾ.ಪಂ ಅಧ್ಯಕ್ಷ ಗಿರೀಶ್ ಅಮೀನ್, ದುರ್ಗ ಗ್ರಾ.ಪಂ ಅಧ್ಯಕ್ಷ ಸತೀಶ್ ನಾಯಕ್, ಎರ್ಲಪಾಡಿ ಗ್ರಾ.ಪಂ ಅಧ್ಯಕ್ಷೆ ಪ್ರಮೀಳಾ ಪೂಜಾರಿ, ನೀರೆ ಗ್ರಾ.ಪಂ ಅಧ್ಯಕ್ಷೆ ಶಾಲಿನಿ,ಕುಕ್ಕುಂದೂರು ಗ್ರಾ.ಪಂ ಅಧ್ಯಕ್ಷೆ ಶಶಿಮಣಿ,ತಹಶಿಲ್ದಾರ್ ಅನಂತಶಂಕರ,ತಾ.ಪಂ ಇಓ ಗುರುದತ್,ಎಂ.ಎನ್, ಉಪತಹಶೀಲ್ದಾರ್ ಮಂಜುನಾಥ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಕಂದಾಯ ಇಲಾಖೆಯ ರಿಯಾಜ್ ಕಾರ್ಯಕ್ರಮ ನಿರೂಪಿಸಿದರು.