Share this news

ಕಾಪು: ಕಾಪು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆ ಹಾಗೂ ಕುಟುಂಬ ಸಮ್ಮಿಲನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಾಪುವಿನ ಕೆವನ್‌ ಸಭಾಭವನದಲ್ಲಿ ಜರಗಿತು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಪು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಗುರಿಯಿದೆ. ಈ ನಿಟ್ಟಿನಲ್ಲಿ ಪತ್ರಕರ್ತರ ಸಲಹೆ ಅವಶ್ಯ. ಸಾಮಾಜಿಕ ಬದ್ಧತೆಯ ಮೂಲಕ ಕ್ಷೇತ್ರದ ಬಗೆಗೆ ಕಾಳಜಿಯಿರುವವರು ಪತ್ರಕರ್ತರು. ನಾಗರಿಕರ ಧ್ವನಿಯಾಗಿ ಸಮಾಜದ ಬೇಕು ಬೇಡಗಳನ್ನು ಸುದ್ದಿಯ ಮೂಲಕ ಜನಪ್ರತಿನಿಧಿಗಳಿಗೆ, ಸರಕಾರಕ್ಕೆ ತಲುಪಿಸುವ ಕಾರ್ಯವನ್ನು ಮಾಡುತ್ತಾರೆ. ಕಾಪು ಪತ್ರಕರ್ತರ ಸಂಘಕ್ಕೆ ಶಾಶ್ವತ ಕಟ್ಟಡಕ್ಕಾಗಿ ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗುವುದು ಎಂದರು.


ಮುಖ್ಯ ಅತಿಥಿಯಾಗಿ ಆಗಮಿಸಿದ ಯುಪಿಸಿಎಲ್, ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ‌ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ, ಮಾಧ್ಯಮಗಳ ಜೀವಂತಿಕೆಯಿಂದ ಸಮಾಜದ ಉನ್ನತಿ ಸಾಧ್ಯ. ಅದಾನಿ ಸಂಸ್ಥೆಯ ಮೂಲಕ ಸಾಮಾಜಿಕ ಜವಾಬ್ದಾರಿಯುತ ಕಾರ್ಯಗಳು ನಡೆದಿದೆ. ಸೂಕ್ತ ಕಟ್ಟಡ ಸೌಲಭ್ಯಕ್ಕಾಗಿ ಸಿ ಎಸ್ ಆರ್ ಯೋಜನೆ ಮೂಲಕ ಕಾಪು ಪತ್ರಕರ್ತರ ಸಂಘಕ್ಕೂ ಆರ್ಥಿಕ ನೆರವು ನೀಡಲಾಗುವುದು ಎಂದರು.

ಕಾಪು ಪತ್ರಕರ್ತರ ಸಂಘದ ವತಿಯಿಂದ ನೂತನ ನೂತನ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರನ್ನು, ಕಲಿಕೆ, ಸಾಧನೆಗೈದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


ಈ ಸಂದರ್ಭ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕರಾದ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ, ಗುಲಾಂ ಮೊಹಮ್ಮದ್ , ಉದ್ಯಮಿ ಹರೀಶ್ ನಾಯಕ್, ಸಂಘದ ಕೋಶಾಧಿಕಾರಿ ಅಬ್ದುಲ್ ಹಮೀದ್, ಜೊತೆ ಕಾರ್ಯದರ್ಶಿ ವಿಜಯ ಆಚಾರ್ಯ ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು.
ಕಾಪು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳು ಸ್ವಾಗತಿಸಿದರು.
ಕ್ರೀಡಾ ಕಾರ್ಯದರ್ಶಿ ಸಂತೋಷ್ ಕಾಪು ಕ್ರೀಡಾ ವಿಜೇತರ ಪಟ್ಟಿ ವಾಚಿಸಿದರು. ಉಪಾಧ್ಯಕ್ಷರಾದ ಹರೀಶ್ ಕಟಪಾಡಿ ನಿರೂಪಿಸಿದರು. ಕಾರ್ಯದರ್ಶಿ ಪುಂಡಲೀಕ ಮರಾಠೆ ವಂದಿಸಿದರು.

Leave a Reply

Your email address will not be published. Required fields are marked *