ಕಾರ್ಕಳ: ಹಿಂದುತ್ವಕ್ಕಾಗಿ, ಹಿಂದೂ ಕಾರ್ಯಕರ್ತರ ಧ್ವನಿಯಾಗಿ ಭ್ರಷ್ಟಾಚಾರ ರಹಿತ ವ್ಯವಸ್ಥೆಗಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದಲೇ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಕಾರ್ಕಳದ ಹೊಟೇಲ್ ಪ್ರಕಾಶ್ ನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿ ನಡೆಸಿದ ಅವರು, ತನ್ನ ಹುಟ್ಟು ಹಬ್ಬದ ದಿನದಂದೇ ಕಾರ್ಕಳದ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡುವ ಮೂಲಕ ಕಳೆದ 4 ತಿಂಗಳಿನಿಂದ ಮುತಾಲಿಕ್ ಸ್ಪರ್ಧೆಯ ವಿಚಾರದಲ್ಲಿ ಹಬ್ಬಿರುವ ಊಹಾಪೋಹಗಳಿಗೆ ತೆರೆ ಎಳೆದರು.
ಹಿಂದುತ್ವದ ಭದ್ರಕೋಟೆಯಾಗಿರುವ ಕಾರ್ಕಳದಲ್ಲೇ ನಿಮ್ಮ ಸ್ಪರ್ಧೆ ಯಾಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಕಳದ ಸಾವಿರಾರು ಹಿಂದೂ ಕಾರ್ಯಕರ್ತರ ನೋವಿಗೆ ಧ್ವನಿಯಾಗಿ, ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಹಾಗೂ ಕಾರ್ಯಕರ್ತರ ಮೇಲಿನ ದಬ್ಬಾಳಿಕೆಯ ವಿರುಧ್ಧ ಹಿಂದುತ್ವದ ಉಳಿವಿಗಾಗಿ ನನ್ನ ಸ್ಪರ್ಧೆಯೇ ಹೊರತು ಯಾವುದೇ ವ್ಯಕ್ತಿಗಳ ಬೆಂಬಲ ನನಗಿಲ್ಲ ,ಸಾವಿರಾರು ನೈಜ ಹಿಂದೂ ಕಾರ್ಯಕರ್ತರೇ ನನ್ನ ಶಕ್ತಿ ಎಂದರು.
ನೀವು ದಾಖಲೆಯಿಲ್ಲದೇ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿಕೆ ನೀಡುತ್ತಿದ್ದೀರಿ ದಾಖಲೆಯಿಲ್ಲದೇ ನಿಮ್ಮ ಆರೋಪ ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಮುತಾಲಿಕ್, ಭ್ರಷ್ಟಾಚಾರದ ವಿಚಾರವಾಗಿ ದಿನಕ್ಕೊಬ್ಬ ಕಾರ್ಯಕರ್ತ ನನ್ನಲ್ಲಿ ಪ್ರಸ್ತಾಪ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ದಾಖಲೆ ಸಹಿತವಾಗಿ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇನೆ ಎಂದು ಎಚ್ಚರಿಸಿದರು.
ನಿಮ್ಮ ಹೋರಾಟ ಬಿಜೆಪಿ ವಿರುದ್ಧವೇ ಅಥವಾ ಹಿಂದುತ್ವದ ಪರವಾಗಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಸ್ಪರ್ಧೆ ನೈಜ ಹಿಂದುತ್ವ, ಭ್ರಷ್ಟಾಚಾರದ ವಿರುದ್ಧ, ಕಾರ್ಯಕರ್ತರ ದಬ್ಬಾಳಿಕೆ ವಿರುದ್ಧವೇ ಹೊರತು ಬಿಜೆಪಿಯ ವಿರುದ್ಧ ಅಲ್ಲ, ದೇಶಕ್ಕೆ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರಂತಹ ನಾಯಕ ಬೇಕೇ ಹೊರತು ಹಿಂದುತ್ವಕ್ಕಾಗಿ, ಗೋಮಾತೆಗಾಗಿ ಹೋರಾಡುವ ಕಾರ್ಯಕರ್ತರ ಮೇಲೆ ಗೂಂಡಾ ಕಾಯಿದೆ,ರೌಡಿ ಶೀಟರ್ ಓಪನ್ ಮಾಡಿ ದಮನಿಸುವ, ಭ್ರಷ್ಟಾಚಾರ ಮಾಡುವ ಬಿಜೆಪಿ ನಾಯಕರು ನಮಗೆ ಬೇಕಿಲ್ಲ ಎಂದು ಗುಡುಗಿದರು.
ಮುತಾಲಿಕ್ ಸ್ಪರ್ಧೆ ಕೇವಲ ಘೋಷಣೆಗೆ ಮಾತ್ರ ಸೀಮಿತ ಎನ್ನುವ ಆರೋಪದ ಕುರಿತು ಸ್ಪಷ್ಟನೆ ನೀಡಿದ ಅವರು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆಸರಿಯುವ ಪ್ರಶ್ನೆಯೇ ಇಲ್ಲ, ಬಿಜೆಪಿಯವರಿಗೆ ನೈತಿಕತೆ ಬದ್ದತೆಯಿದ್ದರೆ ಈ ಬಾರಿ ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸದೇ ನನಗೆ ಟಿಕೆಟ್ ನೀಡಲಿ ಅಥವಾ ನನ್ನನ್ನು ಬೆಂಬಲಿಸಲಿ ಚುನಾವಣೆಯಲ್ಲಿ ಗೆದ್ದ ಬಳಿಕ ಬಿಜೆಪಿಯನ್ನೇ ಬೆಂಬಲಿಸುವುದಾಗಿ ಹೇಳಿದರು.ಮುತಾಲಿಕ್ ಸ್ಪರ್ಧೆಯಿಂದ ಪರೋಕ್ಷವಾಗಿ ಕಾಂಗ್ರೆಸ್ ಗೆ ಲಾಭವಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ವಿರುದ್ಧ ನೂರಾರು ಕೇಸ್ ಹಾಕಿರುವ ಕಾಂಗ್ರೆಸ್ ವಿರುದ್ಧವೇ ನನ್ನ ಸ್ಪರ್ಧೆ ಎಂದಾಗ ಕಾಂಗ್ರೆಸ್ ಗೆಲವಿನ ಪ್ರಶ್ನೆಯೇ ಬರಲಾರದು,ಕಾರ್ಕಳದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ವ್ಯಾಪಕ ಗೋಕಳ್ಳತನವಾಗುತ್ತಿದೆ ಎಂದಾಗ ಬಿಜೆಪಿಗೆ ಹಾಗೂ ಕಾಂಗ್ರೆಸ್ ಗೆ ಏನಿದೆ ವ್ಯತ್ಯಾಸ,ಅಧಿಕಾರಕ್ಕಾಗಿ ಕಾಂಗ್ರೆಸ್ ಜತೆ ಬಿಜೆಪಿಯವರೇ ಹೊಂದಾಣಿಕೆ ಮಾಡಿಕೊಂಡು ಹಿಂದೂ ಕಾರ್ಯಕರ್ತರ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದರು
ಇಂದಿನಿಂದಲೇ ನಾವು ಚುನಾವಣಾ ರಣಕಣಕ್ಕೆ ಧುಮುಕಿದ್ದು ಮುಂದಿನ ತಿಂಗಳಲ್ಲಿ ನಮ್ಮ ಕಚೇರಿ ಉದ್ಘಾಟನೆಯಾಗಲಿದ್ದು ರಾಜ್ಯಾದ್ಯಂತ ಹಿಂದೂ ಕಾರ್ಯಕರ್ತರು ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಬೆಂಗಳೂರು ನಗರ ಅಧ್ಯಕ್ಷ ಸುಂದರೇಶ್ ನರ್ಗಲ್,ನ್ಯಾಯವಾದಿ ಹರೀಶ್ ಅಧಿಕಾರಿ,ಹಿಂದೂ ಹೋರಾಟಗಾರ ಸುಧೀರ್ ಹೆಬ್ರಿ ಮುಂತಾದವರು ಉಪಸ್ಥಿತರಿದ್ದರು.