ಕಾರ್ಕಳ:ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ಸಭೆಗಳಿಗೆ ಭಾಗವಹಿಸಲು ಕರ್ನಾಟಕಕ್ಕೆ ಬಂದಿದ್ದು ಕಾರ್ಕಳದಲ್ಲಿ ಅವರಿಗೆ ಚುನಾವಣೆ ನೀತಿ ಸಂಹಿತೆ ಬಿಸಿ ತಟ್ಟಿದೆ.
ಸಿಎಂ ಯೋಗಿ ಪುತ್ತೂರಿನಿಂದ ಹೆಲಿಕಾಪ್ಟರ್ ಮೂಲಕ ಕಾರ್ಕಳಕ್ಕೆ ಬಂದಿಳಿದ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆಗೆ ಮುಂದಾದರು. ಹೆಲಿಕಾಪ್ಟರ್ ಕಾರ್ಕಳದ ತಾಲೂಕು ಕ್ರೀಡಾಂಗಣದಲ್ಲಿ ಬಂದಿಳಿಯುತ್ತಿದ್ದಂತೆಯೇ ಕಾರ್ಕಳ ಚುನಾವಣಾಧಿಕಾರಿ ಮದನ್ ಮೋಹನ್ ನೇತೃತ್ವದ ಅಧಿಕಾರಿಗಳ ತಂಡ ಕಾಪ್ಟರ್ ನಲ್ಲಿದ್ದ ಬ್ಯಾಗ್,ಬಾಕ್ಸ್ ಗಳನ್ನು ತಪಾಸಣೆ ನಡೆಸಿತು.
ಅಧಿಕಾರಿಗಳು ದಿಢೀರ್ ಹೆಲಿಕಾಪ್ಟರ್ ತಪಾಸಣೆಗೆ ಮುಂದಾದ ವೇಳೆ ಕಾಪ್ಟರ್ ಸಿಬ್ಬಂದಿಗಳು ನಾವು ಸುಮಾರು20 ಕಡೆಗಳಲ್ಲಿ ಕಾರ್ಯಕ್ರಮಗಳಿಗೆ ಭಾಗಿಯಾಗಿದ್ದೇವೆ ನಮಗೆ ಎಲ್ಲಿಯೂ ಇಂತಹ ಸನ್ನಿವೇಶ ಎದುರಾಗಿಲ್ಲ ಎಂದಾಗ,ಚುನಾವಣಾ ಆಯೋಗದ ನೀತಿ ಸಂಹಿತೆ ಕಡ್ಡಾಯವಾಗಿ ಪಾಲಿಸುವುದು ಅಧಿಕಾರಿಗಳ ಕರ್ತವ್ಯ, ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸದೇ ದಯವಿಟ್ಟು ಸಹಕರಿಸಿ ಎಂದು ಚುನಾವಣಾಧಿಕಾರಿ ಮದನ್ ಮೋಹನ್ ಅವರು ಮನವಿ ಮಾಡಿದ ಬಳಿಕ,ಸಿಬ್ಬಂದಿಗಳು ಕಾಪ್ಟರ್ ಪರಿಶೀಲನೆಗೆ ಅವಕಾಶ ಕಲ್ಪಿಸಿದರು
ಕೊನೆಗೂ ಅಧಿಕಾರಿಗಳುಹೆಲಿಕಾಪ್ಟರ್ ನಲ್ಲಿದ್ದ ಬಾಕ್ಸ್, ಬ್ಯಾಗ್ ಮುಂತಾದ ಸಾಮಾಗ್ರಿಗಳನ್ನು ತಪಾಸಣೆ ನಡೆಸಿದರು.
ಅಧಿಕಾರಿಗಳಾದ ತಿಲಕ್ ರಾಜ್, ಉಮೇಶ್, ಮಿಥುನ್ ಕುಮಾರ್ ತಪಾಸಣೆ ಕಾರ್ಯದಲ್ಲಿ ಭಾಗಿಯಾಗಿದ್ದರು