Share this news

ಕಾರ್ಕಳ: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ಶ್ರೀರಾಮ ಮೂರ್ತಿ ತಯಾರಿಸಲು ಕಾರ್ಕಳದ ಬೃಹತ್ ಕೃಷ್ಣಶಿಲೆಯು ಅಯ್ಕೆಯಾಗಿದ್ದು, ಕಾರ್ಕಳದ ನೆಲ್ಲಿಕಾರು ಗ್ರಾಮದಿಂದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಇತ್ತೀಚೆಗೆ ಬೃಹತ್ ಟ್ರೇಲರ್ ಟ್ರಕ್‌ನಲ್ಲಿ ಶಿಲೆಯನ್ನು ಕಳುಹಿಸಿಕೊಡಲಾಯಿತು.

ಕಾರ್ಕಳದ ನೆಲ್ಲಿಕಾರಿನ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿದ್ದ 9.5 ಅಡಿ ಎತ್ತರ, 6 ಅಡಿ ಅಗಲ ಹಾಗೂ 10 ಟನ್ ತೂಕದ ಈ ಕೃಷ್ಣ ಶಿಲೆಯನ್ನು ಅಯೋಧ್ಯೆಗೆ ಟ್ರಕ್‌ನಲ್ಲಿ ಕಳುಹಿಸಿಕೊಡುವುದಕ್ಕೂ ಮುನ್ನ ಬಜಗೋಳಿಯ ಅಯ್ಯಪ್ಪ ಮಂದಿರದಲ್ಲಿ ಪ್ರಾರ್ಥನೆ ನಡೆಸಲಾಯಿತು. ಕೆಲವು ದಿನಗಳ ಹಿಂದಷ್ಟೇ ಅಯೋಧ್ಯೆಯಿಂದ ತಜ್ಞರ ತಂಡ ನೆಲ್ಲಿಕಾರುವಿಗೆ ಭೇಟಿ ನೀಡಿ ಶಿಲೆಯ ಪರಿಶೀಲನೆ ನಡೆಸಿತ್ತು. ಮಳೆ, ಬಿಸಿಲು, ಬೆಂಕಿ ಮತ್ತು ಯಾವುದೇ ವಿಪರೀತ ಪರಿಸ್ಥಿತಿಯನ್ನು ತಡೆದುಕೊಳ್ಳುವ ಸಾಂರ್ಥ್ಯ ಇರುವ ಶಿಲೆ ಎಂಬುದನ್ನು ಖಚಿತಪಡಿಸಿದ ನಂತರ ತಂಡವು ಅದನ್ನು ಆಯ್ಕೆ ಮಾಡಿತ್ತು.

ಅಯೋಧ್ಯೆಯ ರಾಮ ಮೂರ್ತಿಗೆ ಕಾರ್ಕಳದ ಶಿಲೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದು ಕಾರ್ಕಳ ಶಾಸಕರಾಗಿರುವ ಇಂಧನ ಸಚಿವ ವಿ. ಸುನಿಲ್ ಕುಮಾರ್ ಪ್ರತಿಕ್ರಿಯಿಸಿದ್ದು, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರ ಪ್ರಯತ್ನದಿಂದಾಗಿ ಇದು ಸಾಧ್ಯವಾಯಿತು. ಇದರಿಂದ ಕಾರ್ಕಳವು ಜಾಗತಿಕವಾಗಿ ಪ್ರಸಿದ್ಧಿ ಪಡೆಯುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಾರ್ಕಳದ ನೆಲ್ಲಿಕಾರಿನ ಶಿಲೆಗಳನ್ನು ಹಲವಾರು ಶಿಲ್ಪಗಳ ನಿರ್ಮಾಣದಲ್ಲಿ ಬಳಸಲಾಗಿದ್ದು, ದೇಶ ವಿದೇಶಗಳ ವಿವಿಧ ಸ್ಥಳಗಳಲ್ಲಿ ಪ್ರದರ್ಶನಗೊಂಡಿವೆ.ಅಯೋಧ್ಯೆಯ ರಾಮ ಮೂರ್ತಿಗೆ ಕರ್ನಾಟಕದ ಕಾರ್ಕಳದ ಈದು ಗ್ರಾಮದ ಕೃಷ್ಣಶಿಲೆ ಆಯ್ಕೆಯಾಗಿರುವ ಬಗ್ಗೆ ಇತ್ತೀಚೆಗಷ್ಟೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು. ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ಎನ್ನುವಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭ್ಯವ ಪ್ರಭು ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪವಿತ್ರ ಶ್ರೀ ರಾಮರ ಮೂರ್ತಿಗೆ ಕರ್ನಾಟಕದ ಕಾರ್ಕಳದ ಈದು ಗ್ರಾಮದ ಕೃಷ್ಣಶಿಲೆ ಆಯ್ಕೆಯಾಗಿದೆ. ಶಿಲ್ಪಿಗಳ ತವರೂರು ಎಂದೇ ಖ್ಯಾತವಾಗಿರುವ ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿದ್ದ ಶಿಲೆಯನ್ನು ಆಯ್ಕೆ ಮಾಡಲಾಗಿದೆ. ಸಂಪೂರ್ಣ ವಿಶ್ವವೇ ಈ ಶಿಲೆಯಿಂದ ರೂಪುಗೊಳ್ಳಲಿರುವ ಭಗವಾನ್ ಶ್ರೀ ರಾಮನ ದರ್ಶನ ಪಡೆಯಲಿದೆ ಎಂಬುದು ನಮ್ಮನ್ನು ಪುಳಕಿತರನ್ನಾಗಿ ಹಾಗೂ ಪುನೀತರನ್ನಾಗಿಸುತ್ತದೆ.

Leave a Reply

Your email address will not be published. Required fields are marked *