Share this news

ಕಾರ್ಕಳ: ಕಲಾವಿದರ ರಕ್ಷಣಾ ವೇದಿಕೆ (ರಿ) ಬೆಂಗಳೂರು ಇವರು ಆಯೋಜಿಸಿದ ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವ -2023ರ ರಾಜ್ಯ ಮಟ್ಟದ ಬಾಲ ಪ್ರತಿಭಾ ರತ್ನ ಪ್ರಶಸ್ತಿಯನ್ನು ಕಾರ್ಕಳದ ಬಾಲಪ್ರತಿಭೆ ಕು. ಅಪೂರ್ವಳಿಗೆ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಬಾಗಲಗುಂಟೆ ಸಾಯಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗುರುಗಳ ಸಹಾಯವಿಲ್ಲದೇ ಕೇವಲ ಯೂಟ್ಯೂಬ್ ನೋಡಿ ನೃತ್ಯ ಅಭಿನಯವನ್ನು ಕಲಿತ ಅಪೂರ್ವ ಮೊದಲು ಶಾಲೆಯಲ್ಲಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡು ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.ತದನಂತರ ಬೇರೆ ಬೇರೆ ಸ್ಪರ್ಧೆಗಳಲ್ಲಿ ಅಂದರೆ ನೃತ್ಯ ನಾಟಕ ಛದ್ಮವೇಷ ಯೋಗ ಚಿತ್ರಕಲೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾಳೆ.
ಕಾರ್ಕಳದ ಅಶೋಕ್ ಹಾಗೂ ಅಕ್ಷತಾ ದಂಪತಿಯ ಮಗಳಾದ ಅಪೂರ್ವ ಕಾರ್ಕಳದ ಕ್ರೈಸ್ಟ್ ಆಂಗ್ಲ ಮಾಧ್ಯ,ಮ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
ಕಲಿಯುವ ಆಸಕ್ತಿ ಹಾಗೂ ಹುಮ್ಮಸ್ಸಿದ್ದರೆ ಯಾವ ಸಾಧನೆಯನ್ನೂ ಮಾಡಬಹುದೆನ್ನುವುದನ್ನು ಅಪೂರ್ವ ಸಾಧಿಸಿ ತೋರಿಸಿದ್ದಾಳೆ. ಬಾಲ್ಯದಿಂದಲೇ ಅವಳ ಪ್ರತಿಭೆಯನ್ನು ಗುರುತಿಸಿದ ಹೆತ್ತವರು,ಗುರುಗಳು ಹಾಗೂ ಮಾರ್ಗದರ್ಶಕರ ಪ್ರೋತ್ಸಾಹದಿಂದ ಇಂದು ಉತ್ತಮ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.ಇದರ ಜತೆಗೆ ಆಕೆಗೆ ಸದಾ ಬೆನ್ನೆಲುಬಾಗಿ ಜತೆಗಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಮೆರಿಯನ್ ಡಿ ಸೋಜಾ, ಶಾಲಾ ಶಿಕ್ಷಕರು, ಪುರಸಭಾ ಸದಸ್ಯ ಶುಭದ ರಾವ್, ನಾಗೇಶ್ ಬೆಳ್ಳಾರೆ, ವಿಜಯ್ ಕುಮಾರ್ ಜೈನ್ ಮತ್ತು ವಿಜಯ ಮುಂಡ್ಲಿ, ಪ್ರಕಾಶ್ ಸೇರಿದಂತೆ ಎಲ್ಲರ ಸಹಕಾರದಿಂದ ಅವಳ ಸಾಧನೆಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.
ಇಂದಿನ ಸ್ಮಾರ್ಟ್ಫೋನ್ ಯುಗದಲ್ಲಿ ಮಕ್ಕಳು ಸಾಮಾನ್ಯವಾಗಿ ಮೊಬೈಲ್ ಗೀಳು ಅಂಟಿಸಿಕೊಳ್ಳುತ್ತಾರೆ ಆದರೆ ಅಪೂರ್ವ ಯಾವುದೇ ಮೊಬೈಲ್ ಗೇಮ್ಸ್ ಎಂದು ಕಾಲಹರಣ ಮಾಡದೆ ತನ್ನ ಅವಿರತ ಪ್ರಯತ್ನದ ಮೂಲಕ ವಿಶೇಷ ಸಾಧನೆ ಮಾಡಿದ್ದಾಳೆ. ಇದಲ್ಲದೇ ಕೋವಿಡ್ ಸಮಯದಲ್ಲೂ ಮನೆಯಲ್ಲಿ ಸುಮ್ಮನೆ ಕೈಕಟ್ಟಿ ಕೂರದೆ ಅನೇಕ ಆನ್ಲೈನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾಳೆ. ಅದರಲ್ಲಿ ಜೆಸಿಐ ಕಾರ್ಕಳ ನಡೆಸಿದ ಆನ್ಲೈನ್ ಡ್ಯಾನ್ಸ್ ಕಾಂಪಿಟೇಶನ್ ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಳು.
ಕೇವಲ ಪ್ರಶಸ್ತಿ ಗಳಿಸುವುದು ಮಾತ್ರವಲ್ಲದೇ ತಾನು ಸ್ಪರ್ಧೆಯಲ್ಲಿ ಗೆದ್ದ ನಗದು ಬಹುಮಾನವನ್ನು ಬಡ ಹಾಗೂ ಅಂಗವಿಕಲ ಮಕ್ಕಳಿಗೆ ಕೊಡುಗೆಯಾಗಿ ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಈ ಬಾಲಪ್ರತಿಭೆಯ ಹೃದಯವೈಶ್ಯಾಲತೆಯನ್ನು ಎಲ್ಲರೂ ಮೆಚ್ಚಲೇಬೇಕು.

Leave a Reply

Your email address will not be published. Required fields are marked *