ಕಾರ್ಕಳ: ಚುನಾವಣೆಗಳು ಬಂದಾಗ ಮಾತ್ರ ಮತ ಕೇಳಲು ಬರುವ ಕಾಂಗ್ರೆಸ್ ಗೆ ಕಾರ್ಕಳದ ಮತದಾರರು ಧಿಕ್ಕರಿಸಲಿದ್ದು ಈ ಬಾರಿ ಸಚಿವ ಸುನಿಲ್ ಕುಮಾರ್ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಜನರು ಬಿಜೆಪಿ ಗೆ ಮತ ನೀಡಲಿದ್ದಾರೆ,ಕಾರ್ಕಳದ ಜನ ಸದಾ ಅಭಿವೃದ್ಧಿಯ ಪರವಾಗಿದ್ದಾರೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಹೇಳಿದ್ದಾರೆ.
ಅವರು ಸೋಮವಾರ ಕಾರ್ಕಳದ ಬಿಜೆಪಿ ಕಚೇರಿಯಲ್ಲಿ ಜಂಟೀ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕಾರ್ಕಳವು ಎಲ್ಲಾ ಆಯಾಮಗಳಲ್ಲಿ ಅಭಿವೃದ್ಧಿ ಹೊಂದಿದ್ದು,ಪ್ರವಾಸೋದ್ಯಮ, ನೀರಾವರಿ, ಮೂಲಸೌಕರ್ಯ ವ್ಯವಸ್ಥೆ ಒದಗಿಸುವಲ್ಲಿ ಸಚಿವ ಸುನಿಲ್ ಕುಮಾರ್ ರಾಜ್ಯಕ್ಕೆ ಮಾದರಿ ಯಾಗಿದ್ದಾರೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಜನಬೆಂಬಲ ಸಿಗಲಿದೆ, ಏಪ್ರಿಲ್ 19ರಂದು ಸುನಿಲ್ ಕುಮಾರ್ ನಾಮಪತ್ರ ಸಲ್ಲಿಸಲಿದ್ದು 209 ಬೂತ್ ನಿಂದ ತಲಾ 200 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಮಾತನಾಡಿ, ಕಳೆದ30 ವರ್ಷಗಳಿಂದ ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಟಿಕೆಟ್ ನೀಡದೇ ,ಪಕ್ಷಕ್ಕೆ ಏನೂ ಕೊಡುಗೆ ನೀಡದ,ಕಾರ್ಯಕರ್ತರ ಆಶಯಗಳಿಗೆ ಸ್ಪಂದಿಸದ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ಪ್ರಾಮಾಣಿಕ ಕಾರ್ಯಕರ್ತರಿಗೆ ಮಾಡಿದ ಅವಮಾನ, ನಿಷ್ಠಾವಂತ ಕಾರ್ಯಕರ್ತನಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದಾದರೆ ಕಾರ್ಕಳದ ಜನತೆಗೆ ಕಾಂಗ್ರೆಸ್ ಹೇಗೆ ನ್ಯಾಯ ಒದಗಿಸಲು ಸಾಧ್ಯವೆಂದು ಮಣಿರಾಜ ಶೆಟ್ಟಿ ಪ್ರಶ್ನಿಸಿದರು.
ಕಾರ್ಕಳದಲ್ಲಿ ಈಗಾಗಲೇ ಜಾತಿ ರಾಜಕಾರಣದ ವಿಚಾರ ಮುಂದಿಟ್ಟುಕೊಂಡು ಅಪಪ್ರಚಾರ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು,ಇಂತಹ ಅಪಪ್ರಚಾರಗಳಿಗೆ ಕಾರ್ಕಳದ ಜನ ಕಿವಿಗೊಡದೇ ಸುನಿಲ್ ಕುಮಾರ್ ಅವರ ಅಭಿವೃದ್ಧಿ ಕೆಲಸಗಳಿಗೆ ಮತ ನೀಡಲಿದ್ದಾರೆ ಎಂದು ಮಣಿರಾಜ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಜಗದೀಶ್ ಶೆಟ್ಟರ್ ಅವರಿಗೆ ಎಲ್ಲವನ್ನೂ ಕೊಟ್ಟಿದೆ, ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಕಟ್ಟಿ ಬೆಳೆಸಿ ಶಾಸಕನಿಂದ ಹಿಡಿದು ಮುಖ್ಯಮಂತ್ರಿವರೆಗಿನ ಎಲ್ಲಾ ಅವಕಾಶಗಳನ್ನು ಪಕ್ಷ ಕೊಟ್ಟಿದೆ, ಪಕ್ಷ ತಾಯಿ ಇದ್ದಂತೆ, ಶೆಟ್ಟರ್ ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಬಿಜೆಪಿಗೆ ಯಾವುದೇ ನಷ್ಟವಿಲ್ಲ,ಲಿಂಗಾಯತ ಸಮುದಾಯದ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಇನ್ನಷ್ಟು ಸದೃಢವಾಗಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಣಿರಾಜ ಶೆಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್, ಬೋಳ ಜಯರಾಮ ಸಾಲ್ಯಾನ್, ಆರೆಸ್ಸೆಸ್ ವಿಸ್ತಾರಕ್ ಪ್ರಜ್ವಲ್ ಉಪಸ್ಥಿತರಿದ್ದರು