ಕಾರ್ಕಳ: ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಎಂಬಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರಕಾರಿ ಜಾಗದಲ್ಲಿರುವ ಸಾಮಾಜಿಕ ಅರಣ್ಯಕ್ಕೆ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ಮರಗಳಿಗೆ ಹಾನಿ ಸಂಭವಿಸಿದೆ.
ಸೋಮವಾರ ಮುಂಜಾನೆ ಸುಮಾರು 11ರ ವೇಳೆ ಹೊತ್ತಿಕೊಂಡ ಬೆಂಕಿ ಏಕಾಎಕಿ ಮೂರು ಎಕ್ರೆ ಪ್ರದೇಶಕ್ಕೆ ಹಬ್ಬಿದೆ. ಸಾಮಾಜಿಕ ಅರಣ್ಯದಲ್ಲಿನ ಮರಗಳ ತರಗೆಲೆ, ಒಣ ಹುಲ್ಲಿಗೆ ಬೆಂಕಿಯ ಕೆನ್ನಾಲಗೆ ವ್ಯಾಪಿಸಿದೆ. ಇದರ ಜತೆಗೆ ಗಾಳಿ ಬೀಸುತ್ತಿದ್ದ ಪರಿಣಾಮ ಬೆಂಕಿ ವೇಗವಾಗಿ ಹಬ್ಬುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದಾಗ, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿ ಕೊನೆಗೂ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ಕಾರ್ಯಾಚರಣೆಯಲ್ಲಿ ಹರಿಪ್ರಸಾದ್, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಸಂಜೀವ, ಚಾಲಕ ಜಯ, ಮನೋಹರ ಪ್ರಸಾದ್, ಮುಜಾಲುದ್ದೀನ್, ಬಸವರಾಜ್ ಭಾಗಿಯಾಗಿದ್ದರು.