Share this news

ಕಾರ್ಕಳ: ಇತಿಹಾಸ ಪ್ರಸಿದ್ಧ ಕಾರ್ಕಳ ಆನೆಕೆರೆಯ ಚತುರ್ಮುಖ ಕೆರೆ ಬಸದಿಯು ಸಂಪೂರ್ಣವಾಗಿ ಜೀರ್ಣೋದ್ಧಾರಗೊಂಡು ಇದೀಗ ಪಂಚಕಲ್ಯಾಣ ಮಹೋತ್ಸವಕ್ಕೆ ಸಜ್ಜಾಗಿದೆ. ಇದು ಕೇವಲ ಜೈನ ಸಮುದಾಯದ ಕಾರ್ಯಕ್ರಮವಲ್ಲ ಬದಲಾಗಿ ಇದು ಕಾರ್ಕಳದ ಸಮಸ್ತ ಜನತೆಯ ಉತ್ಸವವಾಗಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಆನೆಕೆರೆ ಚತುರ್ಮುಖ ಬಸದಿಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾಕ್ಟರ್ ಎಂ ಎನ್ ರಾಜೇಂದ್ರ ಕುಮಾರ್ ಹೇಳಿದರು.
ಅವರು ಜ.18 ರಿಂದ 22 ರವರೆಗೆ ಕಾರ್ಕಳ ಆನೆಕೆರೆ ಬಸದಿಯ ಜೀರ್ಣೋದ್ದಾರ ಪ್ರಯುಕ್ತ ಪಂಚಕಲ್ಯಾಣ ಮಹೋತ್ಸವದ ಕುರಿತು ಭಾನುವಾರ ಆನೆಕೆರೆಯ ಬಸದಿಯ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಧಾರ್ಮಿಕ ಹಾಗೂ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು
ಆಧುನಿಕ ಕಾಲಘಟ್ಟಕ್ಕೆ ಅನುಗುಣವಾಗಿ ಸಂಪೂರ್ಣವಾಗಿ ಶಿಲಾಮಯ ಬಸದಿ ನಿರ್ಮಾಣದ ಮೂಲಕ ಆನೆಕೆರೆ ಚತುರ್ಮುಖ ಬಸದಿಯು ರಾಜ್ಯ ಹಾಗೂ ದೇಶದ ಗಮನವನ್ನು ಸೆಳೆದಿದೆ. ಸುಮಾರು 500 ವರ್ಷಗಳ ಇತಿಹಾಸವಿರುವ ಈ ಬಸದಿಯು ವಿಶಾಲವಾದ ಕೆರೆಯ ನಡುವೆ ಪ್ರತಿಷ್ಠಾಪನೆಯಾಗಿರುವುದೇ ಅತ್ಯಂತ ವಿಶೇಷವಾಗಿದೆ.ಇದೀಗ ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಂಡು ಕಂಗೊಳಿಸುತ್ತಿರುವುದು ಕಾರ್ಕಳಕ್ಕೆ ಹೆಮ್ಮೆಯಾಗಿದೆ ಎಂದು ರಾಜೇಂದ್ರಕುಮಾರ್ ಹೇಳಿದರು

ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜ.18 ರಂದು ಸಂಜೆ 3.30ಕ್ಕೆ ಸಭಾ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಸಭಾಧ್ಯಕ್ಷತೆ ವಹಿಸಲಿದ್ದಾರೆ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವ ಡಿ ಸುಧಾಕರ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರ ಎಂ ಕೆ ವಿಜಯ್ ಕುಮಾರ್ ಮಾತನಾಡಿ ಸುಮಾರು 475 ವರ್ಷಗಳ ಹಿಂದಿನ ಚತುರ್ಮುಖ ಕೆರೆ ಬಸದಿಯು ಜೀರ್ಣೋದ್ಧಾರಗೊಂಡು ಮತ್ತೆ ಗತವೈಭವಕ್ಕೆ ಮರಳಿರುವುದು ಸಮಸ್ತ ಜೈನ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.

ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಮಹಾವೀರ ಹೆಗ್ಡೆ ಮುಡಾರು ಮಾತನಾಡಿ, ಶಾಸಕ ಸುನಿಲ್ ಕುಮಾರ್ ಅವರ ವಿಶೇಷ ಪ್ರಯತ್ನದಿಂದ ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಬಸದಿ ಹಾಗೂ ಹೊರಾಂಗಣದ ಕಾಮಗಾರಿ ಪೂರ್ಣಗೊಂಡಿದೆ ಎಂದರು. ಇದಲ್ಲದೇ ಸರ್ಕಾರದ ವತಿಯಿಂದ ಬಸದಿಯ ಸುತ್ತಮುತ್ತ ಶಾಶ್ವತ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು ಇದರ ಉದ್ಘಾಟನೆಯು ಜ.14ರಂದು ನೆರವೇರಲಿದೆ ಎಂದರು. ಪಂಚಕಲ್ಯಾಣ ಮಹೋತ್ಸವವು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಈಗಾಗಲೇ 23 ಸಮಿತಿಗಳನ್ನು ರಚಿಸಲಾಗಿದ್ದು ಎಲ್ಲಾ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿವೆ‌. ಕಾರ್ಯಕ್ರಮಕ್ಕೆ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ, ಕೆರೆಬಸದಿ ಹಾಗೂ ಸಭಾ ಕಾರ್ಯಕ್ರಮದ ಸ್ಥಳಗಳಿಗೆ ತೆರಳಲು‌ ಬೇಕಾದ ವಾಹನದ ವ್ಯವಸ್ಥೆಯನ್ನು ಸಮಿತಿಯ ವತಿಯಿಂದ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಭರತ್ ಕುಮಾರ್ ಜೈನ್, ಕೋಶಾಧಿಕಾರಿ ಶೀತಲ್ ಜೈನ್, ಮೆರವಣಿಗೆ ಸಮಿತಿಯ ಸಂಚಾಲಕ ಸುನಿಲ್ ಕುಮಾರ್ ಬಜಗೋಳಿ, ಸಮಿತಿಯ ಉಪಾಧ್ಯಕ್ಷ ಮಹೇಂದ್ರವರ್ಮ ಉಪಸ್ಥಿತರಿದ್ದರು

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *