ಕಾರ್ಕಳ: ಇಲ್ಲಿನ ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆಶ್ರಯದಲ್ಲಿ ಕಾರ್ಕಳ ತಾಲೂಕು ಗಣಿತ ಶಿಕ್ಷಕರ ಒಂದು ದಿನದ ಕಾರ್ಯಾಗಾರ ನಡೆಯಿತು.
ನಿವೃತ್ತ ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್ ಕಾಕರ್ಯಾಗಾರ ಉದ್ಘಾಟಿಸಿ ಶುಭ ಹಾರೈಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್ ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಸ್ ವಿ ಎಜ್ಯುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಕೆ ಪಿ ಶೆಣೈ ಮಾತನಾಡಿ, ನಿತ್ಯ ಜೀವನದಲ್ಲಿ ಗಣಿತ ಅತ್ಯಂತ ಉಪಯುಕ್ತ. ಪ್ರತಿಯೊಂದಕ್ಕೂ ಗಣಿತ ಬೇಕೇ ಬೇಕು. ಚಂದ್ರಯಾನ 3ರ ಯಶಸ್ವಿ ಪ್ರಯೋಗದಲ್ಲಿ ವಿಕ್ರಮ್ ಲ್ಯಾಂಡರ್ ತನ್ನ ಒಳಗೆ ಪ್ರಗ್ಯಾನ್ ರೋವರ್ ಹೊತ್ತುಕೊಂಡು ಲ್ಯಾಂಡ್ ಆಗುವಾಗ ಅದರ ವೇಗ ಕಡಿಮೆಯಾಗುತ್ತದೆ. ಅಲ್ಲಿಯೂ ಗಣಿತದ ಲೆಕ್ಕಾಚಾರ ಇದೆ. ಚಂದ್ರಯಾನ ಮಾಡಿದ ಜಗತ್ತಿನ ಕೇವಲ ನಾಲ್ಕನೇ ರಾಷ್ಟ್ರ ಭಾರತ ಎನ್ನುವುದು ಒಂದು ಸಾಧನೆಯಾದರೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಮೊದಲ ರಾಷ್ಟ್ರ ಭಾರತ ಎನ್ನುವುದು ಇತಿಹಾಸ. ಇಂತಹ ಇತಿಹಾಸ ನಿರ್ಮಿಸಿದ ಇಸ್ರೋದ ಮಹಾನ್ ಸಾಧನೆಯಲ್ಲಿ ಗಣಿತದ ಲೆಕ್ಕಾಚಾರವೂ ಇದೆ. ಸಾಮಾನ್ಯವಾಗಿ ಗಣಿತ ವಿದ್ಯಾರ್ಥಿಗಳಿಗೆ ಕ್ಲಿಷ್ಟವಾಗುತ್ತದೆ. ಕ್ಲಿಷ್ಟವಾದುದ್ದನ್ನು ವಿದ್ಯಾರ್ಥಿಗಳಿಗೆ ಇಷ್ಟವಾಗುವಂತೆ ಬೋಧಿಸುವುದು ಅಗತ್ಯ. ಆ ನಿಟ್ಟಿನಲ್ಲಿ ಇಂದಿನ ಕಾರ್ಯಾಗಾರ ಯಶಸ್ವಿಯಾಗಿ ತಾಲೂಕಿನ ವಿದ್ಯಾರ್ಥಿಗಳ ಫಲಿತಾಂಶ ವೃದ್ಧಿಸಲಿ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಕೆ ಪಿ ಪ್ರಕಾಶ್ ಕೋಟ್ಯಾನ್, ಪ್ರಾಂಶುಪಾಲ ರಾಮದಾಸ್ ಪ್ರಭು, ಮುಖ್ಯೋಪಾಧ್ಯಾಯ ಯೋಗೇಂದ್ರ ನಾಯಕ್, ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿ ಕೆ.ರಾಜೇಂದ್ರ ಭಟ್, ಹರೀಶ್ ಶೆಟ್ಟಿ, ನಾರಾಯಣ ಶೆಣೈ ಹಾಗೂ ಕಾರ್ಕಳ ತಾಲೂಕಿನ ವಿವಿಧ ಪ್ರೌಢ ಶಾಲೆಯ ಗಣಿತ ಶಿಕ್ಷಕರು ಉಪಸ್ಥಿತರಿದ್ದರು.
ಶಿಕ್ಷಕ ದೇವದಾಸ್ ಕೆರೆಮನೆ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.






