ಕಾರ್ಕಳ: ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಕಚೇರಿಯಲ್ಲೇ ಮಹಿಳಾ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಕಾರ್ಕಳ ಪುರಸಭಾ ವ್ಯಾಪ್ತಿಯ ಮಾರ್ಕೇಟ್ ರಸ್ತೆಯ ನಿವಾಸಿ ಪ್ರಮೀಳಾ ದೇವಾಡಿಗ(30) ಎಂಬವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಕಾರ್ಕಳ ಮಾರ್ಕೇಟ್ ರಸ್ತೆಯ ಮಾಧವ ಕೃಪಾ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿರುವ ಕಾರ್ಕಳ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಗುಮಾಸ್ತೆಯಾಗಿದ್ದ ಪ್ರಮೀಳಾ ಶುಕ್ರವಾರ ಮುಂಜಾನೆ ಕಚೇರಿ ತೆರೆದು ಬಳಿಕ ಮೀಟಿಂಗ್ ಹಾಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಸುಮಾರು 9.30ರ ವೇಳೆಗೆ ಇನ್ನೋರ್ವ ಸಿಬ್ಬಂದಿ ಕಚೇರಿಗೆ ಬಂದಾಗ ಕಚೇರಿಯ ಬಾಗಿಲಿನ ಚಿಲಕ ಒಳಗಿನಿಂದ ಲಾಕ್ ಆಗಿದ್ದನ್ನು ಗಮನಿಸಿ ತನ್ನಲ್ಲಿದ್ದ ಇನ್ನೊಂದು ಕೀ ಬಳಸಿ ಒಳಗಡೆ ಹೋದಾಗ ಪ್ರಮೀಳಾ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ,ಕಾರ್ಕಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ ಕೌಟುಂಬಿಕ ಕಾರಣದಿಂದ ನೊಂದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದ್ದು ,ಪೊಲೀಸರ ತನಿಖೆಯಿಂದಷ್ಟೇ ಘಟನೆಗೆ ನೈಜ ಕಾರಣ ತಿಳಿದು ಬರಬೇಕಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.