ಕಾರ್ಕಳ: ಕಾರ್ಕಳ ಗಾಂಧಿ ಮೈದಾನದಲ್ಲಿ ಶನಿವಾರ ಮಧ್ಯಾಹ್ನ ಸುಳಿಗಾಳಿ ಕಾಣಿಸಿಕೊಂಡು ಜನರನ್ನು ವಿಸ್ಮಯಗೊಳಿಸಿದೆ. ಈ ಪ್ರಾಕೃತಿಕ ವಿದ್ಯಮಾನ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.
ಶನಿವಾರ ಮಧ್ಯಾಹ್ನ ಗಾಂಧಿ ಮೈದಾನದಲ್ಲಿ ಮಧ್ಯಾಹ್ನದ ವೇಳೆ ಯುವಕರು ಕ್ರಿಕೆಟ್ ಆಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಸುಳಿಗಾಳಿ ಕಾಣಿಸಿಕೊಂಡಿದ್ದು, ಸುರಳಿ ಆಕಾರದಲ್ಲಿ ಧೂಳು, ಮುಗಿಲೆತ್ತರಕ್ಕೆ ಚಿಮ್ಮಲು ಪ್ರಾರಂಭಿಸಿತು. ಈ ವೇಳೆ ಧೂಳಿನ ಜೊತೆಗೆ ಮೈದಾನದಲ್ಲಿದ್ದ ಕಸ ಗಿಡಗಂಟಿಗಳನೆಲ್ಲ ಹೊತ್ತು ಆಕಾಶಕ್ಕೆ ಚಿಮ್ಮುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಕೆಲ ನಿಮಿಷಗಳ ಕಾಲ ಅತ್ಯಂತ ಕುತೂಹಲದಿಂದ ಜನರು ಈ ವಿದ್ಯಮಾನವನ್ನು ವೀಕ್ಷಿಸಿದರು. ಕಾರ್ಕಳ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾಗಿದ್ದು ಈ ಭಾಗದಲ್ಲಿ ಈ ಹಿಂದೆಯೂ ಇದೇ ರೀತಿಯ ಸುಳಿಗಾಳಿ ಕಂಡುಬಂದಿತ್ತು. ಕಾರ್ಕಳ ಮೂಡುಬಿದಿರೆ, ಅಜೆಕಾರು, ಬೆಳಪು ಪರಿಸರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸುಳಿಗಾಳಿ ಕಾಣಿಸಿಕೊಂಡು ಜನರನ್ನು ವಿಸ್ಮಯಗೊಳಿಸಿತ್ತು.