ಕಾರ್ಕಳ: ಪುರಸಭಾ ವ್ಯಾಪ್ತಿಯ ಬಂಡೀಮಠ ಸಮೀಪದ ಜೋಗಿನಕೆರೆಯ ಅಯ್ಯಪ್ಪ ಮಂದಿರದ ಕೆರೆಗೆ ಗೋಶಾಲೆಯ ಗಂಜಲ ಸೋರಿಕೆಯಿಂದ ನೀರು ಕಲುಷಿತವಾಗಿದ್ದು ಇದರಿಂದ ಸ್ನಾನ ಹಾಗೂ ಪೂಜಾ ವಿಧಿವಿಧಾನಗಳಿಗೆ ತೊಂದರೆಯಾಗುತ್ತಿದೆ ಎಂದು ಅಯ್ಯಪ್ಪ ವೃತಧಾರಿಗಳು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಾರ್ಕಳ ಪುರಸಭೆಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಗುರುವಾರ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕಿ ಲೈಲಾ ಥಾಮಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜೋಗಿನಕೆರೆ ಅಯ್ಯಪ್ಪ ಮಂದಿರಕ್ಕೆ ಹೊಂದಿಕೊಂಡಿರುವ ಗೋಶಾಲೆಯ ಗಂಜಲವನ್ನು ತೆರೆದ ಚರಂಡಿಯಲ್ಲಿ ಬಿಡುತ್ತಿರುವುದನ್ನು ಕಂಡು ಗೋಶಾಲೆಯನ್ನು ನಡೆಸುತ್ತಿರುವ ಗೋಪಿನಾಥ ಭಟ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ತೆರೆದ ಚರಂಡಿಯಲ್ಲಿ ಗೋಶಾಲೆಯ ನೀರು,ಸಗಣಿ ಬಿಡುವುದರಿಂದ ಅದು ಇಂಗಿ ಸಮೀಪದ ಕೆರೆಗೆ ಸೇರಿ ನೀರು ಕಲುಷಿತವಾಗುತ್ತಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳದೇ ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಮುಖ್ಯಾಧಿಕಾರಿ ರೂಪಾ ಶೆಟ್ಟಿ ಎಚ್ಚರಿಸಿದರು, ಅಲ್ಲದೇ ಮೂರು ದಿನಗಳ ಒಳಗಾಗಿ ಕಲುಷಿತ ನೀರನ್ನು ತೆರೆದ ಚರಂಡಿಗೆ ಬಿಡದೇ ಪೈಪ್ ಮೂಲಕ ವಿಲೇವಾರಿ ಮಾಡುವ ಖಡಕ್ ಸೂಚನೆ ನೀಡಿದರು. ಇದಕ್ಕೆ ತಪ್ಪಿದ್ದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು. ಅಧಿಕಾರಿಗಳ ಎಚ್ಚರಿಕೆಗೆ ಮಣಿದ ಗೋಪಿನಾಥ್ ಭಟ್ ಮುಂದಿನ ಶನಿವಾರದೊಳಗೆ ದುರಸ್ತಿಪಡಿಸುವುದಾಗಿ ಅಧಿಕಾರಿಗಳಿಗೆ ಭರವಸೆ ನೀಡಿದರು.
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ