ಕಾರ್ಕಳ: ಮೂಲಸೌಕರ್ಯಗಳಲ್ಲಿ ಒಂದಾದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಮಣಿಪಾಲ್ ಆಸ್ಪತ್ರೆ ಮುಂಚೂಣಿಯಲ್ಲಿದೆ. ರಿಯಾಯಿತಿ ದರದಲ್ಲಿ ಉತ್ಕೃಷ್ಟ ದರ್ಜೆಯ ವೈದ್ಯಕೀಯ ಸೇವೆ ನೀಡುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಅವರು ಮಾರ್ಚ್ 7 ರಂದು ಕಾರ್ಕಳ ಟಿಎಂಎ ಪೈ ರೋಟರಿ ಆಸ್ಪತ್ರೆಯ ಒಪಿಡಿ ಬ್ಲಾಕ್ ಹಾಗೂ ಶಸ್ತ್ರಚಿಕಿತ್ಸಾ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.
ಮಣಿಪಾಲ ಆಸ್ಪತ್ರೆ ಆಧುನಿಕ ಸೌಲಭ್ಯಗಳೊಂದಿಗೆ ಹೊಸ ಸೇವೆಗಳನ್ನು ಜೋಡಿಸುವ ಮೂಲಕ ಪರಿಪೂರ್ಣ ಆಸ್ಪತ್ರೆ ಎನ್ನಿಸಿದೆ. ಕೋವಿಡ್ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆಯ ಸಹಕಾರದಿಂದ ಸರ್ಕಾರವು ಕೋವಿಡ್ ಪಿಡುಗನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಮಣಿಪಾಲ್ ಆಸ್ಪತ್ರೆ ತನ್ನದೇ ಛಾಪು ಮೂಡಿಸಿದೆ.ಇನ್ನು ನಮ್ಮ ತಾಲೂಕಿನ ಜನರು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಹೊರಗೆ ಹೋಗುವ ಅವಶ್ಯಕತೆಯಿಲ್ಲ.. ಕೆ.ಎಂ.ಸಿ ಮಣಿಪಾಲ್ ವತಿಯಿಂದ ಕಾರ್ಕಳದಲ್ಲೇ ಸುಸಜ್ಜಿತ ಆಸ್ಪತ್ರೆ ಒದಗಿಸಿರುವುದು ನಮ್ಮ ಸೌಭಾಗ್ಯ ಎಂದರು.

ಮಾಹೆ ವಿ.ವಿ ಸಹ ಕುಲಾಧಿಪತಿ ಡಾ.ಎಚ್. ಎಸ್. ಬಳ್ಳಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಸರ್ಕಾರಕ್ಕೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಲ್ಲಾ ಸಹಕಾರವನ್ನು ನೀಡಲು ಮಣಿಪಾಲ್ ಆಸ್ಪತ್ರೆ ಬದ್ದವಾಗಿದೆ.ಕಾರ್ಕಳದ ಜನತೆಗೆ ಕೈಗೆಟುಕುವ ದರದಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಕಾರ್ಕದಲ್ಲೇ ಸಿಗಲಿದೆ ಎಂದರು. ಅಲ್ಲದೇ ಅತೀಶೀಘ್ರದಲ್ಲೇ ಸಿಟಿ ಸ್ಕ್ಯಾನ್, ಎಮರ್ಜೆನ್ಸಿ ಸೇವೆ ಕಾರ್ಯಾರಂಭಗೊಳ್ಳಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾಹೆ ಉಪಕುಲಪತಿ ಲೆ|ಜ. ಎಂ.ಡಿ ವೆಂಕಟೇಶ್, ಡಾ.ಕೆ ಶರತ್ ಕುಮಾರ್ ರಾವ್,ಕೆ.ಎಂ.ಸಿ ಮಣಿಪಾಲ್ ಡೀನ್ ಡಾ.ಪದ್ಮರಾಜ ಹೆಗ್ಡೆ, ಮಾಹೆಯ ಬೋಧನಾ ವಿಭಾಗದ ಮುಖ್ಯಸ್ಥರಾದ ಡಾ.ಆನಂದ ವೇಣುಗೋಪಾಲ್,ಕಾರ್ಕಳ ಟಿಎಂ ಎ ಪೈ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕೀರ್ತಿನಾಥ್ ಬಳ್ಳಾಲ್, ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಕಾರ್ಕಳ ಟಿಎಂಎ ಪೈ ರೋಟರಿ ಆಸ್ಪತ್ರೆಯ ಡಾ.ಕೀರ್ತಿನಾಥ್ ಬಳ್ಳಾಲ್ ಸ್ವಾಗತಿಸಿ, ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ.ಸಂಜಯ್ ಕುಮಾರ್ ವಂದಿಸಿದರು
ಕಾರ್ಕಳ ಟಿಎಂಎ ಪೈ ರೋಟರಿ ಆಸ್ಪತ್ರೆಯ ಮ್ಯಾನೇಜರ್ ನಟೇಶ್ ಕುಮಾರ್, ಮಾರ್ಕೆಟಿಂಗ್ ವಿಭಾಗದ ಮೋಹನ್ ಶೆಟ್ಟಿ ಸಹಕರಿಸಿದರು.

