Share this news

ಕಾರ್ಕಳ: ತಾಲೂಕಿನ 7 ಗ್ರಾಮ ಪಂಚಾಯತಿಗಳಿಗೆ ಇಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಒಂದು ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಅಧಿಕಾರ ಸ್ಥಾಪಿಸಿದರೆ ಇನ್ನುಳಿದ 6 ಪಂಚಾಯತ್ ಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ನಿಟ್ಟೆ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷರಾಗಿ ಶೋಭಾ ಹಾಗೂ ಉಪಾಧ್ಯಕ್ಷರಾಗಿ ನಿತಿನ್ ಸಾಲ್ಯಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .
ನಿಟ್ಟೆ ಪಂಚಾಯತ್ ನಲ್ಲಿ 13 ಮಂದಿ ಸದಸ್ಯರಿದ್ದು ಎಲ್ಲರೂ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ. ಮೀಸಲಾತಿ ನಿಗದಿಯಲ್ಲಿ ಅಧ್ಯಕ್ಷ ಅನುಸೂಚಿತ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಕೆಟಗರಿಗೆ ನಿಗದಿಯಾಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಸೋಮಶೇಖರ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಮುಡಾರು ಪಂಚಾಯತ್ ಅಧ್ಯಕ್ಷರಾಗಿ ಶೃತಿ ಡಿ ಅಧಿಕಾರಿ ಹಾಗೂ ಉಪಾಧ್ಯಕ್ಷರಾಗಿ ಅರುಣ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಂಚಾಯತ್ ನಲ್ಲಿ ಒಟ್ಟು 16 ಸದಸ್ಯರಿದ್ದು ಎಲ್ಲರೂ ಬಿಜೆಪಿ ಬೆಂಬಲಿತರು. ಮೀಸಲಾತಿ ನಿಗದಿಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಬಿ) ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಕೆಟಗರಿಗೆ ನಿಗದಿಯಾಗಿತ್ತು. ಶಿಕ್ಷಣ ಸಂಯೋಜಕ ಬಾಲಕೃಷ್ಣ ನಾಯಕ್ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ದಿನೇಶ್ ಪೂಜಾರಿ ಉಪಾಧ್ಯಕ್ಷರಾಗಿ ರಾಜಶ್ರೀ ರಮೇಶ್ ಆಯ್ಕೆಯಾಗಿದ್ದಾರೆ. 10 ಮಂದಿ ಸದಸ್ಯರಿರುವ ಬೋಳ ಪಂಚಾಯತ್ ನಲ್ಲಿ 9 ಮಂದಿ ಬಿಜೆಪಿ ಬೆಂಬಲಿತರು. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿತ್ತು. ಕಾರ್ಕಳ ತಾ.ಪಂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ ಭಾಸ್ಕರ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಹಿರ್ಗಾನ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಸುನಿತಾ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಮಹಾವೀರ ಕಟ್ಟಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 13 ಜನ ಸದಸ್ಯರಿರುವ ಪಂಚಾಯತ್ ನಲ್ಲಿ ಎಲ್ಲರೂ ಬಿಜೆಪಿ ಬೆಂಬಲಿತರು. ಮೀಸಲಾತಿ ನಿಗದಿಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಕೆಟಗರಿ ನಿಗದಿಯಾಗಿತ್ತು. ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಕಾರ್ಕಳ ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ರಾಹುಲ್ ನಾಶಿಪುಡಿ ಕಾರ್ಯ ನಿರ್ವಹಿಸಿದ್ದರು.

ಸಾಣೂರು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಯುವರಾಜ್ ಜೈನ್ ಮಾಡಬೆಟ್ಟು ಹಾಗೂ ಉಪಾಧ್ಯಕ್ಷರಾಗಿ ಯಶೋದಾ ವಿ ಶೆಟ್ಟಿ ಆಯ್ಕೆಯಾಗಿದ್ದಾರೆ .ಒಟ್ಟು 18 ಮಂದಿ ಸದಸ್ಯರಿರುವ ಸಾಣೂರು ಪಂಚಾಯತ್ ನಲ್ಲಿ 13 ಮಂದಿ ಬಿಜೆಪಿ ಹಾಗೂ ಐವರು ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಕಾಂಗ್ರೆಸ್ ನಲ್ಲಿ ಯಾರು ನಾಮಪತ್ರ ಸಲ್ಲಿಸಿರಲಿಲ್ಲ. ಮೀಸಲಾತಿ ನಿಗದಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಕೆಟಗರಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿತ್ತು. ಪಂಚಾಯತ್ ರಾಜ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಂದ್ರನಾಥ್ ಎಂ ವಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಉಳಿದಂತೆ ಮರ್ಣೆ ಹಾಗೂ ಕುಕ್ಕುಂದೂರು ಪಂಚಾಯಿತಿಗಳಲ್ಲಿ ಚುನಾವಣೆ ನಡೆದು ಮರ್ಣೆ ಬಿಜೆಪಿ ಪಾಲಾದರೆ, ಕುಕ್ಕುಂದೂರು ಬಿಜೆಪಿ ಬೆಂಬಲಿತ ಸದಸ್ಯರ‌ ಬಹುಮತ ಇದ್ದರೂ ಭಿನ್ನಮತದ ಬೇಗುದಿಯಿಂದ ಅಧಿಕಾರ ಕಾಂಗ್ರೆಸ್ ಪಾಲಾಗಿದೆ.

Leave a Reply

Your email address will not be published. Required fields are marked *