ಕಾರ್ಕಳ : ಕಳೆದ 2 ದಿನಗಳಿಂದ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾರ್ಕಳ ತಾಲೂಕಿನಾದ್ಯಾಂತ ಪ್ರವಾಹ ಪರಿಸ್ಥೀತಿ ಉಂಟಾಗಿದ್ದು ಭಾರೀ ಮಳೆಗೆ ಕೃಷಿ ಜಮೀನು ಹಾಗೂ ಮನೆಗಳಿಗೆ ಹಾನಿಯಾಗಿದೆ.
ಸಾಣೂರು ಗ್ರಾಮದ ವಾರಿಜ ಮನೆಯ ಸುಂದರಿ ಹರಿಜನ ಎಂಬವರ ಮನೆಯ ಮೇಲ್ಛಾವಣಿ ಕುಸಿದು ಸುಮಾರು 75,000 ರೂ. ನಷ್ಟ ಸಂಭವಿಸಿದೆ. ಇರ್ವತ್ತೂರು ಗ್ರಾಮದ ಕಂಬಳಿಮನೆ ಉದಯ ಜೈನ್ ಎಂಬವರ ಮನೆಯ ಕಂಪೌAಡ್ ಗೋಡೆ ಕುಸಿದಿದ್ದು ಸಾವಿರಾರು ರೂ. ನಷ್ಟ ಸಂಭವಿಸಿದೆ.
ಕಾರ್ಕಳ ತಾಲೂಕಿನ ನಿಂಜೂರು ಗ್ರಾಮದ ಕೀರಬೆಟ್ಟು ನಿವಾಸಿ ಶಂಕರನಾರಾಯಣ ನಾಯಕ್ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಮನೆಯ ಮೇಲ್ಛಾವಣಿ ಕುಸಿದಿದ್ದು ಸುಮಾರು 60,000 ರೂ. ನಷ್ಟ ಸಂಭವಿಸಿದೆ.ಎರ್ಲಪಾಡಿ ಗ್ರಾಮದ ಸೋಮಯ್ಯ ಆಚಾರ್ಯ ಎಂಬವರ ಮನೆಗೆ ಮರ ಬಿದ್ದು 20,000 ರೂ. ನಷ್ಟ ಸಂಭವಿಸಿದೆ. ಇನ್ನುಳಿದಂತೆ ಇನ್ನಾ ಗ್ರಾಮದ ಕುಳ್ತೆ ಎಂಬಲ್ಲಿ ಮನೆಗೆ ನೀರು ನುಗ್ಗಿ 3 ಮನೆಗಳು ಜಲಾವೃತವಾಗಿದ್ದು ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಬೋಳ ಗ್ರಾಮದ ಬೈಲಬೆಟ್ಟು ಎಂಬಲ್ಲಿ ಪ್ರವಾಹದ ರಭಸಕ್ಕೆ ಮರಿಮಾರು ಸಂಪರ್ಕ ರಸ್ತೆ ಬಿರುಕು ಬಿಟ್ಟಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತಮುತ್ತ ಪ್ರವಾಹಸ್ಥಿತಿ ಉಂಟಾಗಿದ್ದು ಸುತ್ತಮುತ್ತಲಿನ ಪ್ರದೇಶ ನೆರೆನೀರಿನಿಂದ ತುಂಬಿ ಹೋಗಿದೆ.