ಕಾರ್ಕಳ: ದಾಯಾದಿ ಸೋದರರಿಬ್ಬರು ಸೇರಿಕೊಂಡು ತಮ್ಮದೇ ಕುಟುಂಬದ ಮೃತಪಟ್ಟ ವ್ಯಕ್ತಿಯೊಬ್ಬರ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಲಪಟಾಯಿಸಿದ್ದಾರೆ ಎಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಂದೆಯ ಮರಣದ ನಂತರ ಅವರ ಹೆಸರಲ್ಲಿದ್ದ ಕೋಟ್ಯಾಂತರ ರೂ. ಮೌಲ್ಯದ ಸ್ಥಿರಾಸ್ತಿ, ಷೇರುಗಳು ಹಾಗೂ ನಗದನ್ನು ಸೋದರ ಸಂಬAಧಿಗಳೇ ಲಪಟಾಯಿಸಿ ವಂಚನೆ ಎಸಗಿದ್ದಾರೆ ಎಂದು ಕಾರ್ಕಳದ ಪುನೀತ್ ರಾವ್ ಎಂಬವರು ನ್ಯಾಯಾಲಯದಲ್ಲಿ ದಾಖಲಿಸಿದ್ದ ಖಾಸಗಿ ದೂರಿನ ಮೇರೆಗೆ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುನೀತ್ ರಾವ್ ಅವರ ತಂದೆ ಅಶೋಕ್ ರಾವ್ ಕಾರ್ಕಳದ ಮನೆಯಲ್ಲಿ ಒಬ್ಬರೇ ವಾಸವಿದ್ದು ಕಳೆದ 2020ರ ಜುಲೈ 13ರಂದು ಮೃತಪಟ್ಟಿದ್ದರು,ಅಶೋಕ್ ರಾವ್ ಅವರು ಕಾರ್ಕಳದ ಕಸಬಾ ಗ್ರಾಮದಲ್ಲಿ ಎಕರೆಗಟ್ಟಲೆ ಸ್ಥಿರಾಸ್ತಿ, ಬ್ಯಾಂಕ್ ಖಾತೆಯಲ್ಲಿ ದೊಡ್ಡ ಮೊತ್ತದ ಹಣ ಹಾಗೂ ವಿವಿಧ ಕಂಪೆನಿಗಳ ಕೋಟ್ಯಾಂತರ ರೂ. ಮೌಲ್ಯದ ಷೇರುಗಳನ್ನು ಹೊಂದಿದ್ದರು. ಅವರು ಮೃತಪಟ್ಟ ಮಾಹಿತಿಯನ್ನು ಆರೋಪಿ ದಿನೇಶ್. ಕೆ (51ವ) ಮತ್ತು ಅವರ ಪತ್ನಿ ಮಂಜುಳಾ ಎಂಬವರು ಪುನೀತ್ ರಾವ್ ಸಂಬAಧಿಕರಾದ ಕೃಷ್ಣರಾವ್ ಎಂಬವರಿಗೆ ಮಾಹಿತಿ ನೀಡಿದ್ದರು. ಮೃತಪಟ್ಟ ಮರುದಿನ ಅಶೋಕ್ ರಾವ್ ಹೆಸರಿನಲ್ಲಿದ್ದ ರೂ.4,24,90,548.90 ಮೌಲ್ಯದ ಷೇರುಗಳನ್ನು ಮತ್ತು ಅವರ ಹೆಸರಿನಲ್ಲಿದ್ದ ಸ್ಥಿರಾಸ್ತಿಗಳನ್ನು ಹಾಗೂ ಅವರ 2,20,76,238.81 ರೂ. ಬ್ಯಾಂಕ್ ಠೇವಣಿಗಳನ್ನು ಆರೋಪಿಗಳಾದ ಕಾರ್ಕಳ ಪೇಟೆಯ ನಿವಾಸಿ ದಿನೇಶ್ ಕೆ (51) ಮತ್ತು ಪೆರ್ವಾಜೆ ಗುದ್ದೇಲ್ ಬಾಕ್ಯಾರು ನಿವಾಸಿ ಪ್ರಸಾದ್ ಕೆ (27) ಎಂಬವರು ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾರೆ ಎಂದು ಪುನೀತ್ ರಾವ್ ದೂರಿನಲ್ಲಿ ತಿಳಿಸಿದ್ದಾರೆ.
ತಂದೆ ಅಶೋಕ್ ರಾವ್ ಅವರು ಮೃತಪಟ್ಟ ಸಂದರ್ಭದಲ್ಲಿ ನಾವೆಲ್ಲ ಅಮೆರಿಕದಲ್ಲಿ ವಾಸವಿದ್ದು, ಆ ಸಂದರ್ಭದಲ್ಲಿ ಕೋವಿಡ್ ಲಾಕ್ ಡೌನ್ ಇದ್ದ ಕಾರಣದಿಂದ ತಾಯಿ ಮತ್ತು ಸಹೋದರಿಗೆ ಊರಿಗೆ ಬರಲು ಸಾಧ್ಯವಾಗಿರಲಿಲ್ಲ.ಅಶೋಕ ರಾವ್ ಅವರು ಜೀವಂತವಾಗಿರುವಾಗ ತನ್ನ ಆಸ್ತಿ ಹಂಚಿಕೆ ಕುರಿತು ಯಾವುದೇ ಉಯಿಲು ಅಥವಾ ಬೇರೆ ಯಾವುದೇ ದಾಖಲೆ ಬರೆದಿರಲಿಲ್ಲ ಎಂದು ಅವರ ಪುತ್ರ ಪುನಿತ್ ರಾವ್ ಅವರು ದೂರಿನಲ್ಲಿ ತಿಳಿಸಿದ್ದು, ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ದಿನೇಶ್.ಕೆ ಹಾಗೂ ಪ್ರಸಾದ್ ಎಂಬವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.