Share this news

ಕಾರ್ಕಳ: ಮಟ್ಕಾ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಇದರ ಪರಿಣಾಮವಾಗಿ ನಿರಾತಂಕವಾಗಿ ನಡೆಯುತ್ತಿದ್ದ ದಂಧೆಗೆ ಬ್ರೇಕ್ ಬಿದ್ದಿದೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಖಡಕ್ ಸೂಚನೆ ನೀಡಿದ್ದರು.ಪೊಲೀಸರ ಹದ್ದಿನ ಕಣ್ಣಿನ ನಡುವೆಯೂ ಹಲವೆಡೆ ಕದ್ದುಮುಚ್ಚಿ ಮಟ್ಕಾ ದಂಧೆ ನಡೆಯುತ್ತಿದ್ದ ಕುರಿತು ಮಾಹಿತಿ ಪಡೆದ ಕಾರ್ಕಳ ನಗರ ಠಾಣಾ ಪೊಲೀಸರು ಕಾರ್ಕಳ ನಗರದ ಹಲವೆಡೆ ದಾಳಿ ನಡೆಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಗದು ವಶ ಪಡಿಸಿಕೊಂಡಿದ್ದಾರೆ.

ಕಾರ್ಕಳದ ತೆಳ್ಳಾರು ಗುಡ್ಡೆಯಂಗಡಿ ಎಂಬಲ್ಲಿ ಮಹೇಶ್ ಎಂಬಾತ ಮಟ್ಕಾ ದಂಧೆ ನಡೆಸುತ್ತಿದ್ದ ಮಾಹಿತಿ ಪಡೆದ ಪೊಲೀಸರು ಆತನನ್ನು ವಶಕ್ಕೆ ಪಡೆದು 2770 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಇದಲ್ಲದೇ ಕುಕ್ಕುಂದೂರು ಗ್ರಾಮದ ಜೋಡುರಸ್ತೆಯ ಗೂಡಂಗಡಿ ಬಳಿ ಆರೋಪಿ ಅವಿನಾಶ್ ಮಟ್ಕಾ ಚೀಟಿ ಸಂಗ್ರಹಿಸುತ್ತಿದ್ದಾಗ ಪೊಲೀಸರು ಆತನನ್ನು ವಶಕ್ಕೆ ಪಡೆದು ಬಂಧಿತನಿಂದ 2200 ರೂ ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಕಾರ್ಕಳ ಸರ್ಕಾರಿ ಆಸ್ಪತ್ರೆ ಬಳಿಯ ಜನರಲ್ ಸ್ಪೋರ್ ನಲ್ಲಿ ಸತೀಶ್ ಎಂಬಾತ ಮಟ್ಕಾ ದಂಧೆ ನಡೆಸುತ್ತಿರುವ ಮಾಹಿತಿ ಪಡೆದ ನಗರ ಠಾಣಾ ಪೊಲೀಸರು ದಾಳಿ ನಡೆಸಿ ಆತನಿಂದ 3500 ರೂ ನಗದು ಹಾಗೂ ಮಟ್ಕಾ ನಂಬರ್ ಸಂಗ್ರಹಿಸಿದ್ದ ಚೀಟಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ಎಸ್ಪಿಯವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

 

 

Leave a Reply

Your email address will not be published. Required fields are marked *