ಕಾರ್ಕಳ : ಕಾರ್ಕಳ ನಗರ ಠಾಣೆಯ ಎಸ್ಐ ಪ್ರಸನ್ನ ಎಂ.ಎಸ್. ಅವರ ಅತ್ಯುತ್ತಮ ಸೇವೆಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ.ಆಡಳಿತ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್ ಮುಖ್ಯಮಂತ್ರಿ ಪದಕ ಪಡೆದ ಸಿಬ್ಬಂದಿಗಳ ಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದಾರೆ.
ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಸನ್ನ ಎಂ.ಎಸ್. ಅವರು 2022ರ ಜನವರಿಯಲ್ಲಿ ಕಾರ್ಕಳ ನಗರ ಪೊಲೀಸ್ ಠಾಣೆಯ ಎಸ್ಐ ಆಗಿ ಅಧಿಕಾರ ವಹಿಸಿದ್ದರು. ಮೂಲತಃ ಶಿವಮೊಗ್ಗದವರಾದ ಪ್ರಸನ್ನ ಕಳೆದ 7 ವರ್ಷಗಳ ಹಿಂದೆ ಇಲಾಖೆಗೆ ಸೇರ್ಪಡೆಗೊಂಡಿದ್ದು, 4 ವರ್ಷಗಳ ಕಾಲ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿ ಕರ್ತವ್ಯ ನಿರ್ವಹಿಸಿದ್ದರು. ಪೊಲೀಸ್ ಸೇವೆಯಲ್ಲಿನ ಕಾರ್ಯದಕ್ಷತೆಯ ಮೂಲಕ ಇಲಾಖೆಯ ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ಸುಳ್ಯದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಬೇಧಿಸುವಲ್ಲಿ ಎನ್ಐಎ ತನಿಖಾ ತಂಡದಲ್ಲಿ ಪ್ರಸನ್ನ ಪ್ರಮುಖ ಪಾತ್ರ ವಹಿಸಿದ್ದರು.
ಇದೀಗ ಕಾರ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರಸನ್ನ ಅವರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಈಗಾಗಲೇ ಗೋವು ಕಳ್ಳತನ, ಮನೆಗಳ್ಳತನ ಮುಂತಾದ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.