Share this news

ಕಾರ್ಕಳ:ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಬಿಜೆಪಿಯವರು ಚುನಾವಣೆಗಳನ್ನು ಗೆಲ್ಲಲು ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳುವುದಕ್ಕೆ ಹಾಗೂ ರಾಜಕೀಯ ಲಾಭಕ್ಕಾಗಿ ಕಾರ್ಕಳದಲ್ಲಿ ಪರಶುರಾಮ ಥೀಮ್ ಪಾರ್ಕ್ ನಲ್ಲಿ ನಕಲಿ ಪ್ರತಿಮೆ ಸ್ಥಾಪಿಸಲಾಗಿದೆ ಎಂದರು.

ಧರ್ಮ,ನಂಬಿಕೆಯನ್ನು ಘಾಸಿಗೊಳಿಸಿದ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.ಮಾತ್ರವಲ್ಲದೇ ಈ ಯೋಜನೆಯಲ್ಲಿ ಅವ್ಯವಹಾರ ನಡೆಸಿದ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಕ್ಕೆ ಈಗಾಗಲೇ ಸಿಎಂ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು‌‌.
ಪರಶುರಾಮನ‌ ನಕಲಿ ಮೂರ್ತಿ ಪ್ರತಿಷ್ಟಾಪಿಸುವ ಮೂಲಕ ಕಾರ್ಕಳದ ಶಾಸಕರು ಸಾವಿರಾರು ಜನರ ಧಾರ್ಮಿಕ‌ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದರು.
ತಾಂತ್ರಿಕ ಅನುಮೋದನೆಯಿಲ್ಲದೇ ಏಕಾಎಕಿ ಪ್ರತಿಮೆ ಎತ್ತಂಗಡಿ ಮಾಡಿರುವುದು ಕ್ರಿಮಿನಲ್ ಅಪರಾಧವಾಗುತ್ತದೆ ಎಂದು ಸುಧೀರ್ ಮರೊಳ್ಳಿ ಹೇಳಿದರು‌.
ಕಾನೂನು ವಿರೋಧಿಗಳು,ಸಂವಿಧಾನದ ವಿರೋಧಿಗಳು ಯಾವುದೇ ಕಾರಣಕ್ಕೂ ಜನಪ್ರತಿನಿಧಿಗಳಾಗಿ ಆಯ್ಕೆಯಾಗಬಾರದು ಎಂದರು‌.

ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ,ಪರಶುರಾಮ‌ ಥೀಮ್ ಪಾರ್ಕಿನ ಕಾಮಗಾರಿ ತರಾತುರಿಯ ಕಾಮಗಾರಿಯಲ್ಲ ಇದು ಕೇವಲ ವಂಚನೆಯ ಭಾಗವಾಗಿದೆ ಎಂದ ರೈ, ಅಧರ್ಮದ ವಿರುದ್ದ ಹೋರಾಟವೇ ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದೆ, ನಕಲಿ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಸುನಿಲ್ ಕುಮಾರ್ ಹಿಂದೂ ಧರ್ಮದ ಧಾರ್ಮಿಕ ನಂಬಿಕೆಗೆ ಘಾಸಿ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಮಾತನಾಡಿ,ಪರಶುರಾಮ‌ ಥೀಮ್ ಪಾರ್ಕಿನ ನಕಲಿ ಪ್ರತಿಮೆ ಕಾಮಗಾರಿ ಸ್ಥಗಿತವಾಗಬೇಕು ಅಲ್ಲದೇ ಈ ಮೂರ್ತಿಯ ನೈಜತೆಯ ಕುರಿತ ತನಿಖೆಗೆ ಸಮಿತಿ ರಚನೆಯಾಗಬೇಕು ಹಾಗೂ ತಾಂತ್ರಿಕ ಪರಿಣಿತರ ತಂಡವೇ ಈ ಮೂರ್ತಿಯ ಮರುಪ್ರತಿಷ್ಟಾಪನೆ ಮಾಡಬೇಕೆಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಮಾತನಾಡಿ,ನಾವು ಪರಶುರಾಮ ಪಾರ್ಕ್ ನಿರ್ಮಾಣದ ವಿರೋಧಿಗಳಲ್ಲ,ಆದರೆ ನಕಲಿ ಪ್ರತಿಮೆ ನಿರ್ಮಾಣ ಮಾಡಿ ಜನರ ಧಾರ್ಮಿಕ ನಂಬಿಕೆಗೆ ಅಪಚಾರ ಎಸಗಲಾಗಿದೆ ಎಂದು ಅವರು ಆರೋಪಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ.ಅಂಶು,ವಿಕಾಸ್ ಹೆಗ್ಡೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್ ರಾಜ್ ಕಾಂಚನ್, ಡಿ,ಆರ್ ರಾಜು,ಕಿಶನ್ ಹೆಗ್ಡೆ ಕೊಳ್ಕೆಬೈಲು, ಚಂದ್ರಶೇಖರ ಬಾಯರಿ, ಸದಾಶಿವ ದೇವಾಡಿಗ,ದೀಪಕ್ ಕೋಟ್ಯಾನ್,ಮಹಿಳಾ ಕಾಂಗ್ರೆಸ್ ನಾಯಕಿ ಅನಿತಾ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *