ಕಾರ್ಕಳ: ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಬೈಲೂರು ಸಮೀಪದ ಉಮಿಕಲ್ ಬೆಟ್ಟದಲ್ಲಿ 14.42 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯಲ್ಲಿ ಅಕ್ರಮ ಹಾಗೂ ಭಾರೀ ಭ್ರಷ್ಟಾಚಾರ ನಡೆದಿದೆ,ಈ ಕಾಮಗಾರಿಯ ಕುರಿತು ತನಿಖೆಗೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತೆ ದಿವ್ಯಾ ನಾಯಕ್ ಹಾಗೂ ಚಿತ್ತರಂಜನ್ ಶೆಟ್ಟಿ ನೇತೃತ್ವದ ಸಮಾನಮನಸ್ಕ ಹೋರಾಟಗಾರರು ಆಗಸ್ಟ್ 26ರಂದು ಶನಿವಾರ ಪರಶುರಾಮ ಥೀಮ್ ಪಾರ್ಕ್ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಸರ್ಕಾರದಿಂದ ಮಂಜೂರಾತಿಯಾಗದೇ ಗೋಮಾಳ ಜಮೀನಿನಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣವಾಗಿದೆ ಎಂದು ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ.ಹಾಗಾದರೆ ಈ ಯೋಜನೆಗೆ ಭೂಮಿ ಮಂಜೂರಾತಿಯಾಗದೇ ಅನುದಾನ ಬಿಡುಗಡೆ ಹೇಗೆ ಸಾಧ್ಯ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.ಅಲ್ಲದೇ 14 ಕೋ.ರೂ ಯೋಜನಾ ವೆಚ್ಚದಲ್ಲಿ ಸುಮಾರು 6 ಕೋ.ರೂ ಗೂ ಮಿಕ್ಕಿ ಹಣ ಪಾವತಿಯಾಗಿದ್ದು, ಇದರಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.
ಇತ್ತ ಧರಣಿ ಸತ್ಯಾಗ್ರಹ ನಡೆಯುತ್ತಿದ್ದ ವಿಚಾರ ತಿಳಿದ ತಹಶಿಲ್ದಾರ್ ಅನಂತಶಂಕರ ಸ್ಥಳಕ್ಕೆ ಭೇಟಿ ನೀಡಿ ಧರಣಿ ಸತ್ಯಾಗ್ರಹ ಹಿಂಪಡೆಯುವಂತೆ ಮನವೊಲಿಸಲು ಮುಂದಾದರು. ಆದರೆ ತಹಶಿಲ್ದಾರ್ ಮನವಿಗೆ ಜಗ್ಗದ ಪ್ರತಿಭಟನಾಕಾರರು, ಪರಶುರಾಮ ಥೀಮ್ ಪಾರ್ಕಿನ ಕಾಮಗಾರಿಯ ತನಿಖೆ ಹಾಗೂ ಪರಶುರಾಮ ಪುತ್ಥಳಿಯ ನೈಜತೆಯ ತನಿಖೆಯಾಗದೇ ಧರಣಿ ಹಿಂಪಡೆಯುವ ಪ್ರಶ್ನೆಯೇ ಇಲ್ಲವೆಂದು ಬಿಗಿಪಟ್ಟು ಹಿಡಿದಿದ್ದಾರೆ.
ಇದೇ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ನಿಷೇಧಿತ ಪ್ರದೇಶದಲ್ಲಿ ಪ್ರತಿಭಟನೆ ನಡೆಸದಂತೆ ಧರಣಿ ನಿರತರಿಗೆ ಮನವಿ ಮಾಡಿದರು. ಆದರೆ ನಿಷೇಧಿತ ಪ್ರದೇಶದಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲವೆಂದಾದರೆ ಈ ಪರಿಸರದಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ಪ್ರವಾಸಿಗರಿಗೆ ಅವಕಾಶ ನೀಡುತ್ತಿರುವುದು ಸರಿಯೇ ಎಂದು ಧರಣಿ ನಿರತರು ಪ್ರಶ್ನಿಸಿದ್ದಾರೆ.
ಒಂದು ವಾರದೊಳಗೆ ಪರಶುರಾಮ ಪುತ್ಥಳಿಯ ನೈಜತೆ ಹಾಗೂ ಕಾಮಗಾರಿ ಗುಣಮಟ್ಟವನ್ನು ಸಾರ್ವಜನಿಕ ಮುಂದೆ ಬಹಿರಂಗಪಡಿಸಬೇಕು, ಒಂದುವೇಳೆ ಅಕ್ರಮ ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪಟ್ಟು ಹಿಡಿದಾಗ,ಕೊನೆಗೂ ತಹಶಿಲ್ದಾರ್ ಅನಂತಶಂಕರ ಪ್ರತಿಕ್ರಿಯಿಸಿ,ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ವಾರದೊಳಗಾಗಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಧರಣಿ ಹಿಂಪಡೆದಿದ್ದಾರೆ.
ಒಟ್ಟಿನಲ್ಲಿ ತುಳುನಾಡಿನ ಪ್ರತೀಕವಾಗಿರುವ ಪರಶುರಾಮ ಮಾತ್ರ ವಿವಾದದ ಕೇಂದ್ರಬಿಂದುವಾಗಿರುವುದು ಮಾತ್ರ ವಿಪರ್ಯಾಸವೇ ಸರಿ