Share this news

ಕಾರ್ಕಳ: ಕಾರ್ಕಳ ಪುರಸಭೆ ಸಾಮಾನ್ಯ ಸಭೆಯು ಅಧ್ಯಕ್ಷೆ ಸುಮಾ ಕೇಶವ್ ಅಧ್ಯಕ್ಷತೆಯಲ್ಲಿ ನಡೆಯಿತು. ಸರಕಾರದ ನಿರ್ದೇಶನದಂತೆ ಪುರಸಭೆ ವ್ಯಾಪ್ತಿಯಲ್ಲಿ ಮನೆ ತೆರಿಗೆ ಶೇ.3 ರಷ್ಟು ಹೆಚ್ಚಿಸಲಾಗಿದ್ದು ತೆರಿಗೆ ಹೆಚ್ಚಳಕ್ಕೆ ಸಭೆಯಲ್ಲಿ ಭಾರೀ ವಿರೋಧ ವ್ಯಕ್ತವಾಯಿತು.

ಸಭೆಯಲ್ಲಿ ಸದಸ್ಯ ಅಶ್ಪಕ್ ಅಹ್ಮದ್ ಮಾತನಾಡಿ, ಕಳೆದ ವರ್ಷವೇ ತೆರಿಗೆ ಹೆಚ್ಚಳದಿಂದಾಗಿ ಜನತೆ ತುಂಬಾ ತೊಂದರೆ ಅನುಭವಿಸಿದ್ದಾರೆ. ಈಗ ಮತ್ತೊಮ್ಮೆ ತೆರಿಗೆ ಹೆಚ್ಚಿಸಿ ಜನರಿಗೆ ಮತ್ತಷ್ಟು ತೊಂದರೆ ಕೊಡಲು ಸಾಧ್ಯವಿಲ್ಲ ಎಂದು ತೆರಿಗೆ ಹೆಚ್ಚಳಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಶೀಘ್ರದಲ್ಲಿಯೇ ಚುನಾವಣೆ ನಡೆಯಲಿದೆ. ಅಧಿಕಾರಕ್ಕೆ ಬಂದ ಹೊಸ ಸರಕಾರದಲ್ಲಿ ಈ ಬಗ್ಗೆ ಹೊಸ ನಿರ್ದೇಶನಗಳು ಬರುವ ಸಾಧ್ಯತೆಯಿದೆ ಎಂದರು. ಯೋಗೀಶ್ ದೇವಾಡಿಗ ಮಾತನಾಡಿ, ಪುರಸಭೆಯ ಸದಸ್ಯರು ಸರ್ವಾನುಮತದಿಂದ ವಿರೋಧಿಸಿರುವುದನ್ನು ಸರಕಾರದ ಗಮನಕ್ಕೆ ತನ್ನಿ ಎಂದರು.

ಇದಕ್ಕೆ ಪ್ರತಿಕ್ರಯಿಸಿದ ಮುಖ್ಯಾಧಿಕಾರಿ ರೂಪಾ ಜಿ.ಶೆಟ್ಟಿ, ಸರಕಾರದ ನಿರ್ದೇಶನವನ್ನು ಪಾಲಿಸಬೇಕಾಗಿದೆ ಎಂದರು.

ಅಂಗಡಿ ಬಾಡಿಗೆದಾರರು ಒಳ ಒಪ್ಪಂದದ ಆಧಾರದಲ್ಲಿ ಬೇರೆಯವರಿಗೆ ಅಂಗಡಿಯನ್ನು ಕೊಟ್ಟಿದ್ದು ಇದು ಕಾನೂನುಬಾಹಿರವಾಗಿದೆ.ಬಾಡಿಗೆದಾರನ ಹೆಸರಿನಲ್ಲಿ ಉದ್ಯಮ ಲೈಸನ್ಸ್ ಪಡೆದು ಇನ್ನೊಬ್ಬರು ಒಳ ಬಾಡಿಗೆಗೆ ಅಂಗಡಿ ನಡೆಸುವುದಕ್ಕೆ ಅವಕಾಶವಿಲ್ಲ, ಅದರ ನಡುವೆ ಪಾರ್ಕಿಂಗ್ ಜಾಗದಲ್ಲಿ ಅಂಗಡಿಯನ್ನು ವಿಸ್ತರಿಸಿದ್ದು ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕೆಂದು ಶುಭದ್ ರಾವ್ ಆಗ್ರಹಿಸಿದರು

ರಸ್ತೆಗಳಿಗೆ ಅಳವಡಿಸಿದ ಝೀಬ್ರಾ ಕ್ರಾಸಿಂಗ್ ಪೈಂಟಿAಗ್ 2 ತಿಂಗಳಲ್ಲೇ ಅಳಿಸಿ ಹೋಗುತ್ತಿದೆ. ಸಂಚಾರ ಮಾಡುವ ವೇಳೆ ದೊಡ್ಡ ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ. ತಕ್ಷಣ ಸರಿಪಡಿಸಿ ಎಂದು ಪ್ರಭಾ ಮನವಿ ಮಾಡಿದರು. ಗಂಗಾ ಪ್ಯಾರಡೈಸ್ ಬಳಿ ರಸ್ತೆ ಕೆಟ್ಟು ಹೋಗಿದ್ದು, 6 ತಿಂಗಳಿನಿAದ ಸರಿಪಡಿಸಿಲ್ಲ ಎಂದು ಪ್ರತಿಮಾ ರಾಣೆ ಅಸಮಧಾನ ವ್ಯಕ್ತಪಡಿಸಿದರು. 

ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು ಎಣ್ಣೆಹೊಳೆ ಏತನೀರಾವರಿ ಯೋಜನೆಯ ಪೈಪ್ ಲೈನ್ ಸಂಪರ್ಕವನ್ನು ಬಂಡಿಮಠ ಓವರ್ ಹೆಡ್ ಟ್ಯಾಂಕ್ ಗೆ ಕಲ್ಪಿಸಿದರೆ 5 ವಾರ್ಡುಗಳಿಗೆ ಕುಡಿಯುವ ನೀರು ಪೂರೈಸಬಹುದು ಎಂದು ಅಶ್ಪಕ್ ಅಹಮ್ಮದ್ ಸಲಹೆ ನೀಡಿದರು.


ಬೀದಿ ನಾಯಿಗಳ ಕಾಟ…!
ಕಳೆದ 1 ವರ್ಷದಿಂದ ಬೀದಿ ನಾಯಿಗಳ ಹಾವಳಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರೂ ಪ್ರಯೋಜನವಿಲ್ಲ ಎಂದು ಅಶ್ಪಕ್ ಅಹ್ಮದ್ ದೂರಿದರು. ನನ್ನ ವಾರ್ಡಿನಲ್ಲೂ ಈ ಸಮಸ್ಯೆಯಾಗಿದೆ ಎಂದು ಪ್ರತಿಮಾ ರಾಣೆ ತಿಳಿಸಿದರು.

ಖಾಸಗಿಯವರಿಗೆ ಅವಕಾಶವಿಲ್ಲ:
ಜಾತ್ರೆ ಸಂದರ್ಭದಲ್ಲಿ ಅಂಗಡಿ ಮಳಿಗೆಗಳನ್ನು ಖಾಸಗಿ ಜಾಗದಲ್ಲಿ ತೆರೆದು, ಬಾಡಿಗೆ ನೀಡಲು ಅವಕಾಶವಿಲ್ಲ. ಪುರಸಭೆಯ ಅನುಮತಿ ಕಡ್ಡಾಯ. ಸುಂಕ ವಸೂಲಿಗೆ ಟೆಂಡರ್ ನೀಡಿದ ಬಳಿಕ ಅನ್ಯರು ಹಸ್ತಕ್ಷೇಪ ನಡೆಸಲು ಅವಕಾಶ ನೀಡುವುದಿಲ್ಲ. ಜಾತ್ರೆ ಸಂದರ್ಭ ಉತ್ಪತ್ತಿಯಾಗುವ ಕಸ ವಿಲೇವಾರಿ ಪುರಸಭೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ನೀಡಬಾರದು ಎಂದು ಸರ್ವಾನುಮತದಿಂದ ನಿರ್ಣಯವಾಯಿತು.
ಉಪಾಧ್ಯಕ್ಷೆ ಪಲ್ಲವಿ, ಮುಖ್ಯಾಧಿಕಾರಿ ರೂಪಾ ಜಿ.ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *