ಕಾರ್ಕಳ: ಬಾವಿ ಸ್ವಚ್ಚಗೊಳಿಸಲು ಬಾವಿಗಿಳಿದು ಬಳಿಕ ಮೇಲೆ ಬರಲಾಗದೇ ಪರದಾಡುತ್ತಿದ್ದ ವ್ಯಕ್ತಿಯನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಕಾರ್ಕಳ ಪುರಸಭೆ ವ್ಯಾಪ್ತಿಯ ಬಂಡಿಮಠ ಬಸ್ ನಿಲ್ದಾಣದ ಬಳಿಯ ಗೋಪಿನಾಥ ಪುರಾಣಿಕ್ ಎಂಬವರ ಮನೆಯ ಬಾವಿಯ ಕೆಸರು ತೆಗೆಯಲು ಪವನ್ ಪೂಜಾರಿ(32) ಎಂಬವರು ಬಾವಿಗೆ ಇಳಿದಿದ್ದರು. ಬಾವಿ ಸ್ವಚ್ಚಗೊಳಿಸಿ ಇನ್ನೇನು ಮೇಲೆ ಬರಬೇಕೆಂದು ಪ್ರಯತ್ನಿಸಿದಾಗ ಮೇಲಕ್ಕೇರಲಾಗದೇ ಪರದಾಡುತ್ತಿದ್ದಾಗ ಪುರಾಣಿಕ್ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.
ಘಟನೆಯ ಮಾಹಿತಿ ಪಡೆದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು,ರಕ್ಷಣಾ ಕಾರ್ಯಾಚರಣೆ ನಡೆಸಿ ಬಾವಿಯಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಬಿ ಎಂ ಸಂಜೀವ್,ಸಿಬ್ಬಂದಿಗಳಾದ ಹರಿಪ್ರಸಾದ್ ಶೆಟ್ಟಿಗಾರ್, ಜಯಮೂಲ್ಯ, ನಿತ್ಯಾನಂದ ಬಸವರಾಜ್,ಭೀಮಪ್ಪ ಪಾಲ್ಗೊಂಡಿದ್ದರು