ಕಾರ್ಕಳ: ಕಸ್ತೂರಿ ರಂಗನ್ ವರದಿಯ ಯಥಾವತ್ ಜಾರಿಯಿಂದ ರೈತರಿಗೆ ಅನೇಕ ಸಮಸ್ಯೆಗಳಾಗುತ್ತವೆ. ಈ ವಿಚಾರವಾಗಿ ಭಾರತೀಯ ಕಿಸಾನ್ ಸಂಘವು ವರದಿಯ ಅಧ್ಯಯನ ನಡೆಸಿ ಈಗಾಗಲೇ ಹಲವು ಬಾರಿ ರೈತರೊಂದಿಗೆ ಚರ್ಚೆ ನಡೆಸಿ ಅದರಲ್ಲಿ ಕೈಬಿಡಬೇಕಾದ ಮತ್ತು ಬದಲಾವಣೆ ಮಾಡಬೇಕಾದ ಅಂಶಗಳ ಬಗ್ಗೆ ವಿಸ್ತೃತವಾಗಿ ರೈತರೊಂದಿಗೆ ಚರ್ಚೆ ನಡೆಸಿದೆ. ಅಲ್ಲದೆ ಪರಿಸರ ಸೂಕ್ಷ್ಮ ಪ್ರದೇಶಗಳ ಜನರೊಂದಿಗೆ ಮತ್ತು ರೈತರೊಂದಿಗೆ ಸಭೆ ನಡೆಸಿ ಈಗಾಗಲೇ ಹಲವಾರು ಬಾರಿ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಗೋವಿಂದರಾಜ್ ಭಟ್ ಕಡ್ತಲ ಹೇಳಿದರು.
ಅವರು ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿಯ ಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆದರೂ ಈ ಬಗ್ಗೆ ವರದಿಯಲ್ಲಿ ತಿಳಿಸಿರುವಂತೆ ಸಮರ್ಪಕವಾಗಿ ಎಲ್ಲಿಯೂ ಕೂಡಾ ವರದಿಯನ್ನು ಅನುಷ್ಠಾನ ಮಾಡಬೇಕಾದ ವ್ಯಕ್ತಿಗಳು ಸಮಲೋಚನಾ ಸಭೆಯನ್ನು ನಡೆಸಿಲ್ಲ. ಗ್ರಾಮಸ್ಥರ ಅಭಿಪ್ರಾಯಗಳನ್ನು ಕೂಡಾ ಸಂಗ್ರಹಿಸಿಲ್ಲ. ಈ ಹಿಂದೆ ಸುಮಾರು 10 ವರ್ಷಗಳಿಂದ ಹಲವು ಬಾರಿ ಭಾರತೀಯ ಕಿಸಾನ್ ಸಂಘವು ಜಿಲ್ಲೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆಗಳನ್ನು ನಡೆಸಿದ್ದು, ವರದಿಯ ಅನುಷ್ಟಾನದಲ್ಲಿ ಮಾಡಬೇಕಾದ ಬದಲಾವಣೆಗಳ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಈಗ ಸರಕಾರವು ವರದಿ ಅನುಷ್ಟಾನಕ್ಕೆ ಮುಂದಾಗಿರುವುದು ರೈತರಲ್ಲಿ ಮತ್ತು ಗ್ರಾಮಸ್ಥರಲ್ಲಿ ಅತಂಕ ಮೂಡಿಸಿದೆ. ವರದಿಯ ಯಥಾವತ್ ಜಾರಿಗೆ ಭಾರತೀಯ ಕಿಸಾನ್ ಸಂಘದ ಆಕ್ಷೇಪವಿದೆ ಎಂದರು.
ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಜಿಲ್ಲಾ ಅಭ್ಯಾಸವರ್ಗವು ಕಾರ್ಕಳ ತಾಲೂಕಿನಲ್ಲಿ ನಡೆಯಲಿದ್ದು ಹೆಚ್ಚಿನ ಸದಸ್ಯರು ಅಭ್ಯಾಸವರ್ಗದಲ್ಲಿ ಪಾಲ್ಗೊಳ್ಳಭೇಕು ಎಂದರು.
ಸಭೆಯಲ್ಲಿ ಶೇಖರ್ ಶೆಟ್ಟಿ ನೀರೆ, ಕೆ.ಪಿ.ಭಂಡಾರಿ ಕೆದಿಂಜೆ, ಗ್ರಾಮ ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನಾ ಕಾರ್ಯಕ್ರಮ ನಿರ್ವಹಿಸಿದರು.