Share this news

ಕಾರ್ಕಳ: ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿ ಮಾಸಿಕ ಸಭೆಯು ಸಂಘದ ಅಧ್ಯಕ್ಷರಾದ ಗೋವಿಂದರಾಜ್ ಭಟ್ ಕಡ್ತಲ ಇವರ ಅದ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ಇದೇ ಸಂದರ್ಭದಲ್ಲಿ ರೈತರ ಆರಾಧ್ಯ ದೈವ ಬಲರಾಮ ಜಯಂತಿಯನ್ನು ಆಚರಿಸಲಾಯಿತು. ಸಂಘದ ಸದಸ್ಯರು ಬಲರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು.

ಸಭೆಯಲ್ಲಿ ಗೋವಿಂದ ರಾಜ್ ಭಟ್ ಕಡ್ತಲ ಮಾತನಾಡಿ, ಮುಂದಿನ ಜನವರಿಯಲ್ಲಿ ನಡೆಯಲಿರುವ ಸದಸ್ಯತನ ಅಭಿಯಾನದ ಬಗ್ಗೆ ವಿವರಿಸಿ ತಾಲೂಕಿನಲ್ಲಿ 20,000 ಸದಸ್ಯತನವನ್ನು ಮಾಡಿ ಅಭಿಯಾನವನ್ನು ಯಶಸ್ವಿಗೊಳಿಸಬೇಕಾಗಿ ಕರೆ ನೀಡಿದರು. ಕಸ್ತೂರಿ ರಂಗನ್ ವರದಿಯಲ್ಲಿ ಕೆಲವೊಂದು ಬದಲಾವಣೆ ಮಾಡಿ ಹಿಂದೆ ಚರ್ಚಿಸಿದಂತೆ ಕೃಷಿಕರಿಗೆ ತೊಂದರೆ ಆಗದ ರೀತಿಯಲ್ಲಿ ಜಾರಿಗೊಳಿಸುವಂತೆ ಸರಕಾರ ಕ್ರಮವಹಿಸಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಜಿಲ್ಲಾಸಮಿತಿ ಮೂಲಕ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಲಾಗುವುದು ಎಂದರು. ಕಾರ್ಕಳ ತೀವ್ರ ಬರಪೀಡಿತ ತಾಲೂಕು ಎಂದು ಘೋಷಿಸಿರುವುದನ್ನು ಸಂಘವು ಸ್ವಾಗತಿಸುತ್ತದೆ. ಬರಪೀಡಿತ ಪ್ರದೇಶಗಳಲ್ಲಿ ಬೆಳೆನಷ್ಟ ಹೊಂದಿದ ರೈತರಿಗೆ ಸೂಕ್ತ ಪರಿಹಾರಗಳು ಅತೀ ಶೀಘ್ರದಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಲು ಸರಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷರಾದ ನವೀನ್‌ಚಂದ್ರ ಜೈನ್ ಮಾತನಾಡಿ, ಇನ್ನಾ ಗ್ರಾಮದಲ್ಲಿ ಹಾದು ಹೋಗುವ 400ಕೆವಿ ಸಾಮರ್ಥ್ಯದ ವಿದ್ಯುತ್ ಲೈನ್‌ಗಳಿಂದ ಕೃಷಿ ಭೂಮಿಯು ನಾಶವಾಗಲಿದೆ. ಇದನ್ನು ಈಗಾಗಲೇ ಅಧಿಕಾರಿಗಳು ಪರಿಶೀಲಿಸಿದ್ದು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಭಾ.ಕಿ.ಸಂ ಮುಖಾಂತರ ಹೋರಾಟ ನಡೆಸಲಾಗುವುದು. ಬಾರತೀಯ ಕಿಸಾನ್ ಸಂಘದ ಶಕ್ತಿಯನ್ನು ಬಲಪಡಿಸಲು ಗ್ರಾಮದ ಪ್ರತಿಯೊಬ್ಬ ರೈತನನ್ನು ಸದಸ್ಯರನ್ನಾಗಿಸಬೇಕು ಎಂದರು.

ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ ಭಟ್ ಇರ್ವತ್ತೂರು ಮಾತನಾಡಿ, ತೀರ್ಥಹಳ್ಳಿಯಲ್ಲಿ ನಡೆಯುವ ಕೃಷಿ ಪ್ರಯೋಗ ಪರಿವಾರದ ಅಭ್ಯಾಸವರ್ಗದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸುಂದರ ಶೆಟ್ಟಿ, ಕೆ.ಪಿ.ಭಂಡಾರಿ ಕೆದಿಂಜೆ, ಗ್ರಾಮ ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ಶೈಲೇಶ್ ಮರಾಠೆ ಈದು ಕಾರ್ಯಕ್ರಮ ನಿರ್ವಹಿಸಿದರು.

 

 

 

 

Leave a Reply

Your email address will not be published. Required fields are marked *