ಕಾರ್ಕಳ: ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿ ಮಾಸಿಕ ಸಭೆಯು ನ.1 ರಂದು ಸಂಘದ ಉಪಾಧ್ಯಕ್ಷರಾದ ಸುಂದರ ಶೆಟ್ಟಿ ಮುನಿಯಾಲು ಅದ್ಯಕ್ಷತೆಯಲ್ಲಿ ನಡೆಯಿತು.
ಭಾ.ಕಿ.ಸಂ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪರು ಮಾತಾನಾಡಿ, ಕಳೆದ ಜೂನ್ ತಿಂಗಳಿನಲ್ಲಿ ಉಡುಪಿ ಮಠದಲ್ಲಿ ನಡೆದ ಬೊಗಸೆ ಬೀಜ ಪ್ರಧಾನ ಕಾರ್ಯಕ್ರಮದಲ್ಲಿ ಆಸಕ್ತ ಭತ್ತ ಬೆಳೆಗಾರರಿಗೆ ನೀಡಲಾದ ವಿವಿಧ ದೇಶೀ ತಳಿಯ ಭತ್ತದ ಬೆಳೆಗಳ ಕ್ಷೇತ್ರೋತ್ಸವವನ್ನು ಕೃಷಿ ಪರಿವಾರ, ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲೆ ಮತ್ತು ಸಾವಯವ ಕೃಷಿ ಪರಿವಾರ ಸಹಯೋಗದಲ್ಲಿ ನವಂಬರ್ 11ರಂದು ಅಪರಾಹ್ನ 3 ಗಂಟೆಗೆ ಶೃಂಗ ಶ್ಯಾಮಲ ಬಾರಾಡಿ ಕಾರ್ಕಳ ತಾಲೂಕು ಇಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಈ ಕ್ಷೇತ್ರದಲ್ಲಿಯೇ ಸಾಣೂರು ಮುರತ್ತಂಗಡಿ ಅಬೂಬಕ್ಕರ್ ದಂಪತಿಗಳು ತಮ್ಮ ಮಕ್ಕಳನ್ನು ಜೊತೆಯಾಗಿಸಿ ಬೆಳೆಸಿದ ಸುಮಾರು 850 ಕ್ಕಿಂತ ಹೆಚ್ಚಿನ ದೇಶೀ ತಳಿಯ ಭತ್ತದ ಕ್ಷೇತ್ರದರ್ಶನ ಮತ್ತು ತಳಿಗಳನ್ನು ಪರಿಚಯಿಸಿಕೊಳ್ಳುವ ಅತ್ಯಮೂಲ್ಯ ಅವಕಾಶ ಒದಗಿ ಬಂದಿದೆ. ನಾವೆಲ್ಲರೂ ಹೆಚ್ಚಿನ ಸಂಖ್ಯೆಯ ಆಸಕ್ತ ಕೃಷಿಕರು ಭಾಗವಹಿಸುವಂತೆ ವಿನಂತಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸುಂದರ ಶೆಟ್ಟಿ ಮುನಿಯಾಲು ಮಾತನಾಡಿ, ಮುಂದಿನ ಜನವರಿಯಲ್ಲಿ ನಡೆಯಲಿರುವ ಭಾ.ಕಿ.ಸಂ. ನ ಸದಸ್ಯತಾ ಅಭಿಯಾನದಲ್ಲಿ ನಮ್ಮ ತಾಲೂಕಿನ ಪ್ರತೀ ಗ್ರಾಮದ ಎಲ್ಲಾ ಕುಟುಂಬಗಳ ಪ್ರತೀ ಕೃಷಿಕರನ್ನು ಸದಸ್ಯರನ್ನಾಗಿಸಬೇಕು. ಈ ಕಾರ್ಯದಲ್ಲಿ ತಾಲೂಕು ಮತ್ತು ಗ್ರಾಮ ಸಮಿತಿಗಳ ಎಲ್ಲಾ ಪದಾಧಿಕಾರಿಗಳು ಪರಿಣಾಮಕಾರಿಯಾಗಿ ತೊಡಗಿಸಿಕೊಂಡು ಅಭಿಯಾನವನ್ನು ಯಶಸ್ವಗೊಳಿಸಲು ಸಹಕರಿಸಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಉಡುಪಿ ಜಿಲ್ಲಾ ಮಹಿಳಾ ಪ್ರಮುಖ್ ನಿರ್ಮಲಾ, ಖಜಾಂಚಿ ಹರೀಶ್ ಕಲ್ಯಾ, ಶೇಖರ್ ಶೆಟ್ಟಿ ನೀರೆ, ಗಣೇಶ್ ರಾವ್ ಶಿರ್ಲಾಲು, ರಾಘವೇಂದ್ರ ಭಟ್ ಮುದ್ರಾಡಿ, ಮಹಾಬಲ ಸುವರ್ಣ ನಿಟ್ಟೆ, ಮಂಜುನಾಥ್ ನಾಯಕ್ ಹಿರ್ಗಾನ ಹಾಗೂ ತಾಲೂಕು ಸಮಿತಿ ಮತ್ತು ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನಾ ಕಾರ್ಯಕ್ರಮ ನಿರೂಪಿಸಿದರು.