Share this news

ಕಾರ್ಕಳ : ಸಾಧನೆಗೆ ಯಾವತ್ತೂ ವಯಸ್ಸಾಗಲೀ. ವಿದ್ಯೆಯಾಗಲೀ ಮುಖ್ಯವಲ್ಲ. ಸಾಧಿಸುವ ಛಲ, ಧೈರ್ಯ ಮತ್ತು ಉತ್ಸಾಹ ಬೇಕು. ಬದುಕಿನಲ್ಲಿ ಏರುಪೇರುಗಳು ಸಹಜ. ಅದಕ್ಕೆ ಮೈಮನಗಳನ್ನು ಸಂಕುಚಿತ ಮಾಡಿಕೊಂಡು ವಿಚಲಿತರಾಗುವುದಲ್ಲ. ಇದನ್ನು ನಾಡಿನ ಮಹಾನ್ ಸಾಹಿತಿಯಾಗಿದ್ದ ಕೆ.ಎನ್.ಭಟ್ ಶಿರಾಡಿಪಾಲ್ ಅವರ ಬದುಕನ್ನು ನೋಡಿಯೇ ಗಮನಿಸಬೇಕು. ಅವರು ಮೂರನೆಯ ತರಗತಿ ಓದಿದರೂ ಸ್ವಂತ ಆಸಕ್ತಿಯಿಂದ ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿ, ಅಧ್ಯಾಪಕ ವೃತ್ತಿಯೊಂದಿಗೆ ಸುಮಾರು 38 ಕೃತಿಗಳನ್ನು ಬರೆದು ಕನ್ನಡ ಸಾರಸ್ವತ ಲೋಕವನ್ನು ಬೆಳಗಿದವರು. ಇಂತಹ ಮಹಾನುಭಾವರ ಶತಮಾನ ಸಂಸ್ಮರಣೆ ಬಹುಯೋಗ್ಯ ಕೆಲಸ ಮಾತ್ರವಲ್ಲ ವಿವಿಧ ಕ್ಷೇತ್ರಗಳಲ್ಲಿ ಬಹುಸಾಧನೆ ಮಾಡಿದವರಿಗೆ ಸಂಮಾನಿಸಿ ಗುರುತಿಸುವುದು ಬಹು ಸ್ತುತ್ಯರ್ಹ ಕೆಲಸವೆಂದು ಮೂಡಬಿದಿರೆಯ ಉದ್ಯಮಿ ಕೆ.ಎಸ್.ಶ್ರೀಪತಿ ಭಟ್ ಅವರು ಹೇಳಿದರು.
ಅವರು ಕೆ.ಎನ್.ಭಟ್ ಶಿರಾಡಿಪಾಲ್ ಜನ್ಮಶತಮಾನೋತ್ಸವದ ಪ್ರಯುಕ್ತ ಶ್ರೀಭುವನೇಂದ್ರ ಕಾಲೇಜಿನ ಸಾಹಿತ್ಯಸಂಘದ ವತಿಯಿಂದ ನಡೆದ ಶತನಮನ- ಶತಸಂಮಾನ ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರೂ, ಸಾಹಿತಿ, ಸಂಶೋಧಕ, ಜಾನಪದ ತಜ್ಞರೂ ಆದ ಡಾ.ಅರುಣಕುಮಾರ ಎಸ್. ಆರ್ ಹಾಗೂ ಕಾಲೇಜಿನ ಹಿಂದಿ ವಿಭಾಗ ಮುಖ್ಯರೂ, ಸಾಹಿತಿಗಳೂ ಆದ ಪ್ರೊ.ಎಚ್.ಜಿ.ನಾಗಭೂಷಣ್ ಅವರುಗಳನ್ನು ಶತಮಾನೋತ್ಸವ ಸಮಿತಿ ವತಿಯಿಂದ ಸಮ್ಮಾನಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಮಂಜುನಾಥ ಎ.ಕೋಟ್ಯಾನ್ ವಹಿಸಿ ಮಾತನಾಡಿ ಅನುಕರಣೀಯ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ಸದಾ ಗಮನಿಸಬೇಕು. ಬದುಕಿಗೆ ಅವರ ಸಾಧನೆಗಳನ್ನು ಅಳವಡಿಸಿಕೊಳ್ಳುವ ಕೆಲಸ ಮಾಡಬೇಕೆಂದು ಹೇಳಿದರು.
ಸಮಾರಂಭವನ್ನು ಸಾಹಿತಿ ಕೆ.ಎನ್.ಭಟ್ ಶಿರಾಡಿಪಾಲ್ ಅವರ ಸುಪುತ್ರಿ ವಿಶ್ರಾಂತ ಮುಖ್ಯೋಪಾಧ್ಯಾಯಿನಿ ಕಾರ್ಕಳದ ಶ್ರೀಮತಿ ಅನುಪಮ ಚಿಪ್ಲೂಣ್‌ಕರ್ ಉದ್ಘಾಟಿಸಿದರು. ಇನ್ನೋರ್ವ ಸುಪುತ್ರಿ , ಕಾಲೇಜಿನ ಪೂರ್ವ ವಿದ್ಯಾರ್ಥಿನಿ ಶ್ರೀಮತಿ ನಿವೇದಿತಾ ಗಜೇಂದ್ರ ಅವರು ಭಾವಗಾಯನ ನಡೆಸಿಕೊಟ್ಟರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ನಡೆಯುವ ಶತನಮನ-ಶತಸಂಮಾನ ಕಾರ್ಯಕ್ರಮದ ಸಂಚಾಲಕರಾದ ಜೈಕನ್ನಡಮ್ಮ ಪತ್ರಿಕೆಯ ಸಂಪಾದಕರಾದ ಕೃಷ್ಣಕುಮಾರ್, ಮೂಡುಬಿದಿರೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೆ.ಎನ್.ಭಟ್ ಶಿರಾಡಿಪಾಲ್ ಅವರ ಅಳಿಯ ಮುರಾರಿ ಚಿಪ್ಲೂಣ್‌ಕರ್ ಅವರು ಸಮಾರಂಭದಲ್ಲಿ ಉಪಸ್ಥಿರಿದ್ದರು. ಕುಮಾರಿ ಸೌರಭ ಪಾಠಕ್ ಹಾಗೂ ಸನ್ನಿಧಿ ಪ್ರಾರ್ಥಿಸಿದರು.
ಸಾಹಿತ್ಯ ಸಂಘದ ಕಾರ್ಯದರ್ಶಿ ಶ್ರೀನಿಧಿ ಶೆಟ್ಟಿ ಸ್ವಾಗತಿಸಿ, ವಿದ್ಯಾರ್ಥಿನಿ ಹಿತ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಶ್ವೇತಾ ಹಾಗೂ ದ್ರವ್ಯ ದ್ವಿತೀಯ ಬಿ.ಎ. ನಿರೂಪಿಸಿದರು.

Leave a Reply

Your email address will not be published. Required fields are marked *