Share this news

ಕಾರ್ಕಳ : ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳಿಗಿಂತ ಹೆಚ್ಚು ಶ್ರೇಷ್ಠ ಮತ್ತು ಆಪ್ತವಾದುದು. ವಿದ್ಯಾರ್ಥಿಗಳ ಪ್ರೀತಿಯಷ್ಟೇ ಉಪನ್ಯಾಸಕರಿಗೆ ಸಿಗುವುದಲ್ಲ. ಜ್ಞಾನದ ವಿಸ್ತರಣೆಯಲ್ಲಿ ಅಪೂರ್ವ ಪಾಲುಪಡೆಯುವ ಶಿಕ್ಷಕರು ಮೌನವಾಗಿ ವಿದ್ಯಾರ್ಥಿಗಳಿಂದ ಕೃತಜ್ಞತೆಯನ್ನು ಜೀವಮಾನದುದ್ದಕ್ಕೂ ಪಡೆದುಕೊಳ್ಳುತ್ತಾರೆ. ಕೆಲವು ವಿದ್ಯಾರ್ಥಿಗಳು ಮಾತಿನಲ್ಲಿ ಹೇಳಿದರೆ ಕೆಲವರು ಮೌನದಲ್ಲೇ ಜೀವಮಾನದುದ್ದಕ್ಕೂ ಸಲ್ಲಿಸಿಕೊಂಡಿರುತ್ತಾರೆ. ಭಾಷೆ, ಭಾವಗಳ ಮರು ಸಂಯೋಜನೆ ಶಿಕ್ಷಕರಿಂದಾಗಿ ವಿದ್ಯಾರ್ಥಿಗಳ ಭಾವಕೋಶದಲ್ಲಿ ಆಗುತ್ತದೆ. ಅದರ ಧನಾತ್ಮಕ ಪರಿಣಾಮಗಳನ್ನು ವಿವರಿಸಲು ಅಸಾಧ್ಯ ಎಂದು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆಯ ವಿಶ್ರಾಂತ ಮುಖ್ಯೋಪಾಧ್ಯಾಯಿನಿ, ಶ್ರೀ ಭುವನೇಂದ್ರ ಕಾಲೇಜಿನ ಪೂರ್ವ ವಿದ್ಯಾರ್ಥಿನಿ ಹರ್ಷಿಣಿಯವರು ಹೇಳಿದರು.
ಅವರು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಜರುಗಿದ ಶಿಕ್ಷಕ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಮರುರೂಪಗಳನ್ನು ನೀಡುವ ಮಹಾತ್ಮರು. ಮುಂದಿನ ದಿನಗಳಲ್ಲಿ ಅಗಾಧ ವೈಜ್ಞಾನಿಕ ಹಾಗೂ ತಾಂತ್ರಿಕ ಆವಿಷ್ಕಾರಗಳಿಂದಾಗಿ ಶಿಕ್ಷಕರು ತರಗತಿಗಳಿಗೆ ಅಗತ್ಯವಿಲ್ಲದಿರುವ ಸನ್ನಿವೇಶ ಒದಗಿಬಂದರೆ ಆಶ್ಚರ್ಯವಿಲ್ಲ. ಆದರೂ ಕೆಲವು ಶಿಕ್ಷಕರು ಸಮಾಜಕ್ಕೆ ಒಳ್ಳೆಯ ವಿದ್ಯಾರ್ಥಿರೂಪಗಳನ್ನು ಕೊಡುವುದಕ್ಕೆ ಶ್ರಮಿಸಿದ್ದನ್ನು ಕಂಡಾಗ ಮೈಮನ ತುಂಬಿಕೊಳ್ಳುತ್ತದೆ. ಆ ದೃಷ್ಟಿಯಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಶಿಕ್ಷಕರ ದಿನಾಚರಣೆಯ ಚಿಂತನೆ ಅರ್ಥಪೂರ್ಣವೆಂದರು.

ಪದವಿಪೂರ್ವಕಾಲೇಜಿನ ಪ್ರಾಚಾರ್ಯ ರಮೇಶಸ್ತ್ರ ಎಸ್.ಸಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹರ್ಷಿಣಿ ಹಾಗೂ ಪಿಎಚ್.ಡಿ ಪದವಿ ಗಳಿಸಿದ ಭೌತಶಾಸ್ತ್ರ ವಿಭಾಗದ ಡಾ.ನಯನಾ ಆಚಾರ್ಯ ಅವರನ್ನು ಸಂಮಾನಿಸಲಾಯಿತು.
ಕಾರ್ಯಕ್ರಮದ ಸಂಯೋಜಕ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಭಟ್ ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರೂ, ಕಾಲೇಜಿನ ಹಿರಿಯ ಉಪನ್ಯಾಸಕಿಯೂ ಆದ ಡಾ. ಶಕುಂತಲಾ ವಂದಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ವನಿತಾ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *