ಕಾರ್ಕಳ: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಪುರಸಭಾ ಅಧ್ಯಕ್ಷ ಹಾಗೂ ಸಾಯಿ ಮಂದಿರದ ಸಂಸ್ಥಾಪಕ ಪೆರ್ವಾಜೆ ಮುದ್ದಣನಗರದ ನಿವಾಸಿ ಚಂದ್ರಹಾಸ ಸುವರ್ಣ(67) ಭಾನುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಂದ್ರಹಾಸ ಸುವರ್ಣ ಅವರು ಭಾನುವಾರ ಮುಂಜಾನೆ ನಿತ್ಯದ ವಾಕಿಂಗ್ ಮುಗಿಸಿ ಮನೆಗೆ ಬಂದ ಬಳಿಕ ಸುಸ್ತಾದವರಂತೆ ಕಂಡುಬAದಿದ್ದು ಬಳಿಕ ಹಠಾತ್ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಅವರು ತೀವೃ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಮಾಜ ಎಲ್ಲಾ ರಂಗಗಳಲ್ಲಿಯೂ ಗುರುತಿಸಿಕೊಂಡಿದ್ದ ಚಂದ್ರಹಾಸ ಸುವರ್ಣ ಅವರದ್ದು ಅತ್ಯಂತ ಸರಳ ಹಾಗೂ ಸೌಮ್ಯ ಸ್ವಭಾವದ ವ್ಯಕ್ತಿತ್ವ.ಆರಂಭದಲ್ಲಿ ಜನತಾದಳದಿಂದ ರಾಜಕೀಯ ರಂಗಪ್ರವೇಶ ಮಾಡಿದ್ದ ಸುವರ್ಣ ಅವರು ಪ್ರಥಮ ಬಾರಿಗೆ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿ, ಬಳಿಕ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಕಾರ್ಕಳ ಪುರಸಭೆ ಅಧ್ಯಕ್ಷರಾಗಿ ಕಾರ್ಕಳದ ಅಭಿವೃದ್ದಿಗೆ ಮಹತ್ವದ ಕೊಡುಗೆ ನೀಡಿದ್ದರು. ಕಾರ್ಕಳದ ಸಾಯಿಬಾಬ ನಗರದಲ್ಲಿನ ಪ್ರಶಾಂತ ವಾತಾವರಣದಲ್ಲಿ ಸುಂದರವಾದ ಸಾಯಿಬಾಬ ಮಂದಿರ ನಿರ್ಮಿಸಿದ್ದರು. ಇದರ ಜತೆಗೆ ಸಾಯಿಬಾಬ ಡಿಗ್ರಿ ಕಾಲೇಜು, ಸಾಯಿಬಾಬ ಫ್ಯಾಶನ್ ಹಾಗೂ ಡಿಸೈನಿಂಗ್ ಕಾಲೇಜು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ್ದಾರೆ.
ಕೇವಲ ರಾಜಕೀಯ ಹಾಗೂ ಶಿಕ್ಷಣ ರಂಗದಲ್ಲಿ ಮಾತ್ರವಲ್ಲದೇ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿ, ವಲಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದಲ್ಲದೇ ಚಲನಚಿತ್ರ ಹಾಗೂ ನಾಟಕಗಳಲ್ಲಿಯೂ ಹಲವು ಪಾತ್ರಗಳಲ್ಲಿ ನಟಿಸಿ ಹೆಸರುಗಳಿಸಿದ್ದರು. ಉದ್ಯಮಕ್ಷೇತ್ರದಲ್ಲಿಯೂ ಹೆಸರು ಮಾಡಿರುವ ಚಂದ್ರಹಾಸ ಸುವರ್ಣರು ಲೇಔಟ್ ನಿರ್ಮಾಣ ಹಾಗೂ ವಸತಿ ಸಮುಚ್ಚಯಗಳ ನಿರ್ಮಾಣದ ಪಾಲುದಾರರಾಗಿ ಯಶಸ್ವಿ ಉದ್ಯಮಿಯೂ ಆಗಿದ್ದರು.
ಶನಿವಾರ ರಾತ್ರಿ ಹಿರ್ಗಾನದಲ್ಲಿ ನಡೆದ ಅಜೆಕಾರು ಲಯನ್ಸ್ ಕ್ಲಬ್ ನ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ತನ್ನ ಮಾತಿನಲ್ಲಿ ನಗೆಚಟಾಕಿ ಹಾರಿಸಿದ್ದರು, ಮಾತ್ರವಲ್ಲದೇ ಇದು ಅವರ ಕೊನೆಯ ಕಾರ್ಯಕ್ರಮವಾಗಿದ್ದು ಮಾತ್ರ ಅತ್ಯಂತ ಬೇಸರದ ಸಂಗತಿಯಾಗಿದೆ
ಅತ್ಯಂತ ಸರಳ ಹಾಗೂ ವರ್ಣರಂಜಿತ ವ್ಯಕ್ತಿತ್ವದ ಚಂದ್ರಹಾಸ ಸುವರ್ಣ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಗಣ್ಯರ ಸಂತಾಪ:
ಚಂದ್ರಹಾಸ ಸುವರ್ಣ ಅವರ ಹಠಾತ್ ನಿಧನಕ್ಕೆ ರಾಜಕೀಯ ನಾಯಕರು ದಿಗ್ಭçಮೆ ವ್ಯಕ್ತಪಡಿಸಿದ್ದು, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್, ಉಡುಪಿ ಜಿಲ್ಲಾ ಕಾರ್ಕಳ ಶಾಸಕ ಸುನಿಲ್ ಕುಮಾರ್, ಮುನಿಯಾಲು ಉದಯ ಶೆಟ್ಟಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ,ಪ್ರಭಾಕರ ಬಂಗೇರ, ಕಾಂಗ್ರೆಸ್ ವಕ್ತಾರ ಶುಭದ್ ರಾವ್, ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಥಾಮಸ್ ಲೂಕಸ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.