ಕಾರ್ಕಳ: ಉಭಯ ಜಿಲ್ಲೆಗಳಾದ ಉಡುಪಿ ಹಾಗೂ ದ.ಕ. ಜಿಲ್ಲೆಯಲ್ಲಿ ಕಾರ್ಯವ್ಯಾಪ್ತಿ ಹೊಂದಿರುವ ಕಾರ್ಕಳದ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿಯು 2022-23ನೇ ಸಾಲಿನಲ್ಲಿ 725 ಕೋಟಿ ರೂ. ಮೀರಿ ವ್ಯವಹಾರ ನಡೆಸಿ, 4.15 ಕೋ. ರೂ. ಲಾಭ ಗಳಿಸಿದ್ದು, ಶೇ. 18 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಹೇಳಿದ್ದಾರೆ.
ಅವರು ಸೊಸೈಟಿಯ ರಾಜಾಪುರ ಸಭಾಭವನದಲ್ಲಿ ಜರುಗಿದ 27ನೇ ವಾರ್ಷಿಕ ಮಹಾಸಭೆಯಲ್ಲಿ 2022-2023ರ ಸಾಲಿನ ವ್ಯವಹಾರದ ಪ್ರಗತಿಯ ಅಂಕಿ ಅಂಶ ನೀಡಿ, 4.19 ಕೋಟಿ ರೂ. ಪಾಲು ಬಂಡವಾಳ, 19.09 ಕೋಟಿ ರೂ. ಸ್ವಂತ ನಿಧಿ, 155.14 ಕೋಟಿ ರೂ. ಠೇವಣಿ ಹಾಗೂ 129.03 ಕೋಟಿ ರೂ. ಸಾಲ ವಿತರಿಸಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸಿರುವುದು ಗ್ರಾಹಕರು ಸಹಕಾರಿ ಸಂಸ್ಥೆಯ ಮೇಲೆ ಇಟ್ಟಿರುವ ವಿಶ್ವಾಸವೇ ಕಾರಣವಾಗಿದೆ ಎಂದರು.

2022-2023ನೇ ಸಾಲಿನಲ್ಲಿ ಬಜೆಟ್‌ಗಿಂತ ಹೆಚ್ಚಿಗೆ ಖರ್ಚಾದ ವಿವರ ಮಂಡಿಸಿ, ಅನುಮೋದನೆ ಪಡೆಯಲಾಯಿತು.
ಸಭೆಯಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಸಂಘದ ಸದಸ್ಯ ದೇವದಾಸ್ ಪಾಟ್ಕರ್ ಮತ್ತು ಶಿಕ್ಷಣ ಹಾಗೂ ಇತರೇ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿ ಸಮ್ಯಕ್ ಆರ್. ಪ್ರಭು ಅವರನ್ನು ಅಭಿನಂದಿಸಲಾಯಿತು. ಇತ್ತೀಚೆಗೆ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ಸಂಘದ ಸದಸ್ಯರಾದ ಸಚ್ಚಿದಾನಂದ ಪ್ರಭು ಕಣಂಜಾರು, ಸನ್ಮತಿ ನಾಯಕ್ ಮಿಯ್ಯಾರು ಹಾಗೂ ಪ್ರಭಾವತಿ ನಾಯಕ್ ಮರ್ಣೆ ಅವರನ್ನು ಗೌರವಿಸಲಾಯಿತು. ಕಳೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ 17 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು.

ಉಪಾಧ್ಯಕ್ಷ ಸುರೇಂದ್ರ ನಾಯಕ್, ನಿರ್ದೇಶಕರಾದ ಹರಿಶ್ಚಂದ್ರ ತೆಂಡುಲ್ಕರ್ ಮಾಳ, ಹರೀಶ್ ನಾಯಕ್ ಅಜೆಕಾರು, ಸದಾನಂದ ಪಾಟ್ಕರ್ ಬಜಗೋಳಿ, ನೀರೆ ರವೀಂದ್ರ ನಾಯಕ್, ಮಂಜುನಾಥ ಪ್ರಭು ಹೆಬ್ರಿ, ಸಚ್ಚಿದಾನಂದ ಪ್ರಭು ಕಣಂಜಾರು, ಕೇಶವ ನಾಯಕ್ ಎಳ್ಳಾರೆ, ಮಂಜುನಾಥ ನಾಯಕ್ ಮಣಿಪಾಲ, ವಿಶ್ವನಾಥ ಪಾಟ್ಕರ್ ಬೆಳ್ಮಣ್, ಸುನೀಲ್ ನಾಯಕ್ ಮಟ್ಟಾರು, ರಾಮಕೃಷ್ಣ ತೆಂಡುಲ್ಕರ್ ಹಿರ್ಗಾನ, ಇಂದುಮತಿ ಜಿ. ಪ್ರಭು ಜೋಡುರಸ್ತೆ ಹಾಗು ಕಲಾವತಿ ಯು. ನಾಯಕ್ ಹಿರ್ಗಾನ ಉಪಸ್ಥಿತರಿದ್ದರು.
ಸೊಸೈಟಿಯ ಉಪಾಧ್ಯಕ್ಷ ಸುರೇಂದ್ರ ನಾಯಕ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಂದ್ರ ನಾಯಕ್ 2022-2023ನೇ ಸಾಲಿನ ವಾರ್ಷಿಕ ವರದಿ, ಆರ್ಥಿಕ ತಖ್ತೆ ಹಾಗೂ 2023-24ನೇ ಸಾಲಿನ ಅಂದಾಜು ಬಜೆಟ್ ಮಂಡಿಸಿದರು. ಕೇಂದ್ರ ಕಚೇರಿ ವ್ಯವಸ್ಥಾಪಕ ಉದಯ ಪ್ರಭು ವಂದಿಸಿದರು. ಸಭೆಯ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ರಾವಣ ಅವಸಾನ ಯಕ್ಷಗಾನ ತಾಳಮದ್ದಲೆ ಜರಗಿತು.

