ಕಾರ್ಕಳ : ಕಾರ್ಕಳದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಡಿ. 4ರಿಂದ ಮೂತ್ರ ಶಾಸ್ತ್ರ ತಜ್ಞರ ಹೊರರೋಗಿ ಸೌಲಭ್ಯ ಹಾಗೂ ಡಿ. 7 ರಿಂದ ಪ್ಲಾಸ್ಟಿಕ್ ಸರ್ಜರಿ ತಜ್ಞರ ಹೊರರೋಗಿ ಸೌಲಭ್ಯ ಆರಂಭಿಸಲಾಗುತ್ತಿದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ವಿವೇಕ್ ಪೈ ಅವರು ಪ್ರತೀ ಸೋಮವಾರ ಹಾಗೂ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಜೋಸೆಫ್ ಥಾಮಸ್ ಅವರು ತಿಂಗಳ ಮೊದಲ ಹಾಗೂ ಮೂರನೇ ಗುರುವಾರ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಸಮಾಲೋಚನೆಗಾಗಿ ಲಭ್ಯವಿರಲಿದ್ದಾರೆ.
ಈ ಎರಡು ಪ್ರಮುಖ ಆರೋಗ್ಯ ಸೇವೆಗಳಿಂದ ಕಾರ್ಕಳ ಸುತ್ತಮುತ್ತಲಿನ ರೋಗಿಗಳಿಗೆ ಸಕಾಲದಲ್ಲಿ ರೋಗ ನಿರ್ಣಯಿಸಿ ಗುಣಮಟ್ಟದ ವೈದ್ಯಕೀಯ ಆರೈಕೆ ನೀಡಲು ಇನ್ನಷ್ಟು ಸಹಕಾರಿಯಾಗಲಿದೆ.
ಮೂತ್ರದ ಸೋಂಕು, ಮೂತ್ರಪಿಂಡದ ಕಲ್ಲು, ಪ್ರೊಸ್ಟೇಟ್ ತೊಂದರೆ, ಮೂತ್ರ ಕೋಶ ಸಂಬಂಧಿತ ಇತರ ಸಮಸ್ಯೆಗಳಿದ್ದಲ್ಲಿ ಮೂತ್ರ ಕೋಶ ತಜ್ಞರನ್ನು ಭೇಟಿ ಮಾಡಬಹುದು. ಸುಟ್ಟ ಗಾಯ, ಸೀಳು ತುಟಿ, ಚರ್ಮದಲ್ಲಿನ ಗಾಯ, ಮಧುಮೇಹ ಪಾದ, ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಇನ್ನಿತರ ಸಂಬಂಧಿತ ತೊಂದರೆಗಳಿಗೆ ಪ್ಲಾಸ್ಟಿಕ್ ಸರ್ಜನ್ ರನ್ನು ಭೇಟಿ ಮಾಡಬಹುದಾಗಿದೆ
ಎಂದು ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ – 9731601150 ಅಥವಾ 08258 230583 ಅನ್ನು ಸಂಪರ್ಕಿಸಬಹುದು.