ಕಾರ್ಕಳ: ಸರಕಾರಿ ಆಸ್ಪತ್ರೆಗಳು ಬಡವರಿಗೆ ಸಂಜೀವಿನಿ ಇದ್ದಂತೆ.ಆದರೆ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ವಾರ ಗರ್ಭಿಣಿ ಮಹಿಳೆಯೊಬ್ಬರ ಮಗು ಹೆರಿಗೆ ಮುನ್ನವೇ ಮೃತಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಮಹಿಳೆಯ ಕುಟುಂಬ ಸದಸ್ಯರು ಹಾಗೂ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸಾರ್ವಜನಿಕರು ತೀವೃ ಆಕ್ರೋಶ ವ್ಯಕ್ತಪಡಿಸಿದರು.
ಮಾರ್ಚ್ 27 ರಂದು ಸೋಮವಾರ ಬೆಳಗ್ಗೆಗರ್ಭಿಣಿ ಮಹಿಳೆ ಸುಬಿತಾ ಹಾಗೂ ಪ್ರಮೋದ್ ಮುತಾಲಿಕ್ ಸೇರಿದಂತೆ ನೂರಾರು ಸಾರ್ವಜನಿಕರು ಆಸ್ಪತ್ರೆಯ ಅವ್ಯವಸ್ಥೆಯ. ವಿರುದ್ಧ ಹಾಗೂ ಕರ್ತವ್ಯಲೋಪದ ವಿರುದ್ಧ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕೆ.ಎಸ್ ರಾವ್ ಅವರನ್ನು ತೀವೃವಾಗಿ ತರಾಟೆಗೆ ತೆಗೆದುಕೊಂಡರು.
ತಪಾಸಣೆಯ ಬಳಿಕ ತಾಯಿ ಹಾಗೂ ಮಗುವಿನ ಆರೋಗ್ಯ ಉತ್ತಮವಾಗಿದೆ ಎಂದು ಹೇಳಿದ್ದು ಹೆರಿಗೆಗೆಂದು ಆಸ್ಪತ್ರೆಗೆ ಬಂದಾಗ ಮಗು ಸಾವನ್ನಪ್ಪಿದ್ದು ಹೇಗೆ ಎಂದು ಮಹಿಳೆಯ ತಾಯಿ ಆಶಾ ಪೂಜಾರಿ ಡಾ.ಕೆ.ಎಸ್ ರಾವ್ ವಿರುದ್ಧ ತೀವೃ ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆಗಳಿದ್ದರೂ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.ವೈದ್ಯರ ನಿರ್ಲಕ್ಷ್ಯದಿಂದ ಬಾಳಿ ಬದುಕಬೇಕಿದ್ದ ನನ್ನ ಮಗಳ ಮಗು ಅನ್ಯಾಯವಾಗಿ ಮೃತಪಟ್ಟಿದೆ ಎಂದು ವೈದ್ಯರ ವಿರುದ್ಧ ಹಿಡಿಶಾಪ ಹಾಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ.ಕೆ.ಎಸ್ ರಾವ್,ಗರ್ಭಿಣಿ ಮಹಿಳೆ ಆಸ್ಪತ್ರೆಗೆ ಬರುವ ಮುನ್ನವೇ ಮಗು ಹೊಟ್ಟೆಯೊಳಗೆ ಮೃತಪಟ್ಟಿತ್ತು ಆದ್ದರಿಂದ ಮಂಗಳೂರು ಲೇಡಿಗೋಷನ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ ಮಗು ಹೆರಿಗೆ ಮುನ್ನವೇ ಮೃತಪಟ್ಟಿತ್ತು ಎಂದು ಸ್ಪಷ್ಟನೆ ನೀಡಲು ಮುಂದಾದಾಗ,ಈ ಪ್ರಕರಣದಲ್ಲಿ ನಿಮ್ಮ ಸ್ಪಷ್ಟನೆ ಸರಿಯಿಲ್ಲ, ಬಡರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ ಹಾಗೂ ಆಸ್ಪತ್ರೆಯಲ್ಲಿ ಉಪಕರಣಗಳ ಕೊರತೆಯ ನೆಪವೊಡ್ಡಿ ಬಡರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಬೇಡಿ ಸಮಸ್ಯೆಗಳಿದ್ದಲ್ಲಿ ಮೇಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತನ್ನಿ,ಮುಂದೆ ಇಂತಹ ಘಟನೆಗಳು ಆದಲ್ಲಿ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಪ್ರಮೋದ್ ಮುತಾಲಿಕ್ ಅವರು ಡಾ.ಕೆ.ಎಸ್ ರಾವ್ ಅವರನ್ನು ಎಚ್ಚರಿಸಿದರು. ಈಗಾಗಲೇ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ಮಗುವನ್ನು ಕಳೆದುಕೊಂಡಿದ್ದಾರೆ ಆದರೆ ಇಂತಹ ನೋವು ಯಾರಿಗೂ ಬಾರದಿರಲಿ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದರು.
ಬಡರೋಗಿಗಳಿಗೆ ಸಮಸ್ಯೆಯಾದರೆ ಸಹಿಸಲು ಸಾಧ್ಯವಿಲ್ಲ: ಪ್ರಮೋದ್ ಮುತಾಲಿಕ್
ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ 3 ಸ್ಕ್ಯಾನಿಂಗ್ ಯಂತ್ರಗಳಿದ್ದು ಅವುಗಳ ಆಪರೇಟ್ ಮಾಡಲು ಸಿಬ್ಬಂದಿ ಕೊರತೆಯಿದೆ ಇದರಿಂದ ಗರ್ಭಿಣಿ ಮಹಿಳೆಯರು ಬೆಳಗ್ಗಿನಿಂದ ಸಂಜೆವರೆಗೂ ಸರತಿಯಲ್ಲಿ ನಿಂತುಕೊಳ್ಳಲು ಅಸಾಧ್ಯ, ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ನೇಮಕವಾಗಬೇಕು ಹಾಗೂ ಸ್ಕ್ಯಾನಿಂಗ್ ಮಾಡಲು ಖಾಸಗಿ ಆಸ್ಪತ್ರೆಗಳಿಗೆ ಗರ್ಭಿಣಿ ಮಹಿಳೆಯರನ್ನು ಕಳುಹಿಸಲಾಗುತ್ತಿದೆ ಇದು ಸರಿಯಲ್ಲ ಎಂದರು. ಈ ಹಿಂದೆ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಗಣೇಶ್ ಪ್ರಭು ಅವರನ್ನು ವಾಪಾಸು ಕರೆಸಿಕೊಳ್ಳಬೇಕೆಂದು ಮುತಾಲಿಕ್ ಒತ್ತಾಯಿಸಿದರು.
ಆಸ್ಪತ್ರೆಯಲ್ಲಿ ಬಡವರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ: ಸುನೀತಾ, ನಿಟ್ಟೆ
ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಬಡವರಿಗೆ ಸಮಸ್ಯೆಯಾಗುತ್ತಿದೆ. ಮುಂಜಾನೆ ಬಂದರೂ ವೈದ್ಯಕೀಯ ತಪಾಸಣೆ ತುಂಬಾ ವಿಳಂಬವಾಗುತ್ತಿದೆ. ನಾವು ಮುಂಜಾನೆ ಬಂದು ಸರತಿ ಸಾಲಿನಲ್ಲಿ ಕಾಯುತ್ತಿದ್ದೇವೆ ಎಂದು ಸುನಿತಾ ನಿಟ್ಟೆ ತಮ್ಮ ಅಳಲನ್ನು ತೋಡಿಕೊಂಡರು.
ಬಡವರ ಪಾಲಿಗೆ ಸಂಜೀವಿನಿಯಾಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳಲ್ಲಿನ ವ್ಯವಸ್ಥೆ ಸುಧಾರಣೆಯಾಗಬೇಕು ಆ ಮೂಲಕ ಬಡರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕಿದೆ