Share this news

ಕಾರ್ಕಳ: ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ ಸಾಹಿತಿ ಶೇಖರ ಅಜೆಕಾರು ಅವರ ಅನಿರೀಕ್ಷಿತ ಅಗಲುವಿಕೆಯಿಂದ ಇಡೀ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸ್ಟೋನ್ ಕ್ರಶರ್ ಹಾಗೂ ಕ್ವಾರಿ ಮಾಲಕರ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು.

ಅವರು ಕಾರ್ಕಳ ಹೊಟೇಲ್ ಪ್ರಕಾಶ್ ನಲ್ಲಿ ಸೋಮವಾರ  ಪತ್ರಕರ್ತ ಹಾಗೂ ಸಾಹಿತಿ ದಿ. ಡಾ.ಶೇಖರ ಅಜೆಕಾರು ಅವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತನ್ನ ಕೌಟುಂಬಿಕ ಬದುಕಿಗಾಗಿ ಯಾವುದೇ ಆಸ್ತಿಯನ್ನೂ ಮಾಡದ ಶೇಖರ ಅಜೆಕಾರು ಅವರು ಗಳಿಸಿರುವ ಆಸ್ತಿ ಎಂದರೆ ಅಪಾರ ಅಭಿಮಾನಿ ಬಳಗ ಮಾತ್ರ. ಕನ್ನಡವೇ ತನ್ನ ಉಸಿರಾಗಿಸಿ ನಿತ್ಯ ಕನ್ನಡದ ಧ್ಯಾನ ಮಾಡುತ್ತಾ ಇಹದ ಯಾತ್ರೆ ಮುಗಿಸಿದ ಇಂತಹ ಅಪರೂಪದ ಸಾಹಿತಿ ಶೇಖರ ಅಜೆಕಾರು ಅವರ ಕುಟುಂಬವು ಇಂದು ಅಕ್ಷರಶಃ ಕಷ್ಟದಲ್ಲಿದೆ.
ಇಂದು ಪತ್ರಕರ್ತರ ಬದುಕು ಅತ್ಯಂತ ಶೋಚನೀಯವಾಗಿದೆ.ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪತ್ರಕರ್ತರು ಮಾತ್ರ ಆರ್ಥಿಕ ಭದ್ರತೆಯಿಲ್ಲದೇ ಜೀವನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಜ್ವಲಂತ ಉದಾಹರಣೆ ಎಂದರೆ ಶೇಖರ ಅಜೆಕಾರು, ಅವರು ಪತ್ರಕರ್ತನಾಗಿ ಸಾಹಿತಿಯಾಗಿ ಆಸ್ತಿ ಸಂಪಾದಿಸಿಲ್ಲ ಕೇವಲ ಕನ್ನಡ ಸಾಹಿತ್ಯಕ್ಕಾಗಿ ತನ್ನ ಬದುಕನ್ನು ಅರ್ಪಿಸಿದವರು, ಆದರೆ ಇಂದು ಅ ರ ಅವರ ಪತ್ನಿ ಮಕ್ಕಳ ಬದುಕು ಸಂಕಷ್ಟಕ್ಕೆ ಸಿಲುಕಿದೆ, ಅವರ ಬದುಕಿಗಾಗಿ ನೆರವಿನ ಹಸ್ತದ ಅಗತ್ಯತೆ ಇದೆ. ಆದ್ದರಿಂದ ಧನಸಹಾಯ ಮಾಡಲು ಇಚ್ಚಿಸುವವರು ದೇಣಿಗೆ ರೂಪದಲ್ಲಿ ಸಹಾಯ ಮಾಡುವ ಮೂಲಕ ಅವರ ಕುಟುಂಬಕ್ಕೆ ಆಸರೆ ಕಲ್ಪಿಸಬೇಕಿದೆ ಎಂದರು.
ನಿವೃತ್ತ ಪತ್ರಕರ್ತ ಬಿಪಿನ್ ಚಂದ್ರ ಪಾಲ್ ನುಡಿನಮನ ಸಲ್ಲಿಸಿ ಇಂದು ಪತ್ರಕರ್ತರ ಬದುಕು ಅತ್ಯಂತ ದುಸ್ತರವಾಗಿದೆ. ಇದಕ್ಕೆ ಶೇಖರ ಅಜೆಕಾರು ಉತ್ತಮ ಉದಾಹರಣೆ, ಅವರು ತನ್ನ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಸಾಹಿತ್ಯಕ್ಕಾಗಿ ಜನ ಜೀವನವನ್ನು ಸಮರ್ಪಣೆ ಮಾಡಿದರು. ತನಗಾಗಿ ಎಂದಿಗೂ ಬದುಕದೇ ಸಮಾಜದಲ್ಲಿ ತನ್ನ ಆದರ್ಶಗಳನ್ನು ಬಿಟ್ಟು ಹೋಗಿ ಉಳಿದವರಿಗೆ ದಾರಿದೀಪವಾದರು ಎಂದರು.

ಶೇಖರ ಅಜೆಕಾರು ಅವರ ಕುಟುಂಬಕ್ಕೆ ನೆರವಿನ ಹಸ್ತ

ಈ ಸಂದರ್ಭದಲ್ಲಿ ಶೇಖರ ಅಜೆಕಾರು ಅವರ ಕುಟುಂಬಕ್ಕೆ ಮಾನವೀಯ ನೆರವು ಸಂಗ್ರಹಿಸಲಾಯಿತು. ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ವತಿಯಿಂದ ರೂ 50 ಸಾವಿರ ಚೆಕ್ ಹಸ್ತಾಂತರಿಸಲಾಯಿತು. ಇದಲ್ಲದೇ ದೇಣಿಗೆ ರೂಪದಲ್ಲಿ  ಸಂಗ್ರಹವಾದ 2 ಲಕ್ಷ  ರೂಪಾಯಿ ಧನಸಹಾಯವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಪತ್ರಕರ್ತ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ನ್ಯಾಯವಾದಿ ಸುನಿಲ್ ಕುಮಾರ್ ಶೆಟ್ಟಿ, ಜ್ಯೋತಿ ಪದ್ಮನಾಭ ಬಂಡಿ ಮುಂತಾದವರು ಉಪಸ್ಥಿತರಿದ್ದರು.
ಮಾಧ್ಯಮ ಬಿಂಬ ಹಾಗೂ ಸ್ವಯಂ ಟೈಮ್ಸ್ ಸಂಪಾದಕ ವಸಂತ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕ ನಾಗೇಶ್ ನಲ್ಲೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಶೇಖರ ಅಜೆಕಾರು ಅವರ ಕುಟುಂಬಕ್ಕೆ ಧನಸಹಾಯ ಮಾಡಲಿಚ್ಚಿಸುವವರು

ತಾರಾ ಶೇಖರ ಅಜೆಕಾರು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.

Ac number: 520101252280822
IFSC Code: UBIN0900982
Ajekar Branch
Mobile: 9611158493

 

 

 

 

 

 

 

 

Leave a Reply

Your email address will not be published. Required fields are marked *