ಕಾರ್ಕಳ:ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ನಂದ್ರಬೆಟ್ಟು ನಿವಾಸಿ ಹಿರಿಯ ಸಾಹಿತಿ ಯಶವಂತಿ ಎನ್ ಸುವರ್ಣ (82) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.
ಅವರನ್ನು ಇತ್ತೀಚಿಗೆ ವಯೋಸಹಜ ಅನಾರೋಗ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಾಹಿತ್ಯ ಕ್ಷೇತ್ರದಲ್ಲಿ ಅಲ್ಲದೇ ರಾಜಕೀಯ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದರು. ಕುಕ್ಕುಂದೂರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿ ಬಳಿಕ ಪಂಚಾಯತ್ ಉಪಾಧ್ಯಕ್ಷರಾಗಿ, ಕಾರ್ಕಳ ತಾಲೂಕು ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಸಾಹಿತಿಯಾಗಿ ಸುಮಾರು 14 ಪುಸ್ತಕಗಳನ್ನು ಬರೆದಿದ್ದು ನವಭಾರತ ಪತ್ರಿಕೆಯಲ್ಲಿ ಪ್ರಥಮವಾಗಿ ವರದಕ್ಷಿಣೆ ವಿರೋಧಿ ಲೇಖನವನ್ನು ಬರೆದಿದ್ದು ಸಾಮಾಜಿಕ ಪಿಡುಗುಗಳ ಬಗ್ಗೆ ಹೋರಾಟ ಮಾಡಿದ್ದರು. ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಸಾಹಿತಿ ಯಶವಂತಿ ಸುವರ್ಣರು ಜೀವಿತದ ಅವಧಿಯಲ್ಲೇ ತನ್ನ ನಿಧನ ನಂತರ ತನ್ನ ದೇಹವನ್ನು ಮಣಿಪಾಲ ಆಸ್ಪತ್ರೆಗೆ ನೀಡುವ ಬಗ್ಗೆ ಒಡಂಬಡಿಕೆ ಮಾಡಿಕೊಂಡಿದ್ದರು. ಅವರ ಆಶಯದಂತೆ ಕುಟುಂಬಸ್ಥರು ಇಂದು ಅವರ ದೇಹವನ್ನು ಆಸ್ಪತ್ರೆಗೆ ದಾನ ನೀಡಲಿದ್ದಾರೆ.
ಇಂದು ಬೆಳಿಗ್ಗೆ 10 ಗಂಟೆಗೆ ಮೃತದೇಹವು ಅವರ ಮನೆ ನಕ್ರೆ ನಂದ್ರಬೆಟ್ಟುಗೆ ಬರಲಿದ್ದು ಅ ಹೊತ್ತಿಗೆ ಮಣಿಪಾಲ ವೈದ್ಯರ ತಂಡ ಆಗಮಿಸಿ ದಾನ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ.
ಮೃತರು ಪುತ್ರಿಯರಾದ ಎಂ ಜಿ ಎಂ ಕಾಲೇಜಿನ ನಿವೃತ್ತ ಉಪನ್ಯಾಸಕಿ ಉಷಾರಾಣಿ, ಹಾಗೂ ಮಂಗಳೂರು ಗೋಕರ್ಣಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಆಶಾಲತಾ ಸಹೋದರ ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್, ಅಳಿಯಂದಿರಾದ ಉಡುಪಿ ಎಸ್.ಪಿ ಕಚೇರಿಯ ನಿವೃತ್ತ ಆಡಳಿತ ಅಧಿಕಾರಿ ದಿವಾಕರ ಪೂಜಾರಿ, ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ