ನವದೆಹಲಿ: ರಾಜ್ಯದಲ್ಲಿ ಭೀಕರ ಬರಗಾಲ ಕಾಡುತ್ತಿದ್ದು ಈಗಾಗಲೇ ಕಾವೇರಿ ಒಡಲಲ್ಲಿರುವ ನೀರು ಖಾಲಿಯಾಗುವ ಸ್ಥಿತಿ ತಲುಪಿದೆ. ಹೀಗಾಗಿ ಕರ್ನಾಟಕದ ಸಧ್ಯದ ಪರಿಸ್ಥಿತಿ ತೀರಾ ಶೋಚನೀಯವಾಗಿದ್ದರೂ ಮುಂದಿನ 15 ದಿನಗಳ ಕಾಲ ನಿತ್ಯ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚನೆ ನೀಡಲಾಗಿದೆ. ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಮುಂದಿನ 15 ದಿನಗಳ ಕಾಲ ಪ್ರತಿದಿನ 2,600 ಕ್ಯೂಸೆಕ್ ನೀರು ಹರಿಸಲು ಸೂಚನೆ ನೀಡಲಾಗಿದೆ. ಅಕ್ಟೋಬರ್ ಅಂತ್ಯದವರೆಗೂ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಿತ್ತು. ಇದೀಗ ಅವಧಿ ಮುಕ್ತಾಯದ ಬಳಿಕ 2,600 ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಿದೆ. ಕರ್ನಾಟಕ ಸರ್ಕಾರದಿಂದ ನೀರಿನ ವಿಚಾರದಲ್ಲಿ ನಿಜವಾದ ಪರಿಸ್ಥಿತಿಯನ್ನು ಅರ್ಥ ಮಾಡಿಸುವುದಕ್ಕೆ ಪ್ರಯತ್ನ ಪಟ್ಟರೂ, ಅದು ವ್ಯರ್ಥವಾಗುತ್ತಿದೆ.
ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಸದ್ಯಕ್ಕೆ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ನಾವಿಲ್ಲ ಎಂದೇ ಹೇಳಿದ್ದಾರೆ. ಕಾವೇರಿ ನೀರಿಗಾಗಿ ಕರ್ನಾಟಕದಲ್ಲಿ ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ಇತ್ತಿಚೆಗಷ್ಟೇ ಕಾವೇರಿ ಹೋರಾಟಗಾರರು ಐವತ್ತು ದಿನದ ಕರಾಳ ದಿನವನ್ನು ಆಚರಣೆ ಮಾಡಿದ್ದಾರೆ. ಈಗಲೂ ಕಾವೇರಿಗಾಗಿ ಹೋರಾಟ ಮುಂದುವರೆದಿದೆ.
ಈ ಆದೇಶದಿಂದ ರೈತರು ಮತ್ತೆ ಬೀದಿಗಿಳಿದು ಹೋರಾಟ ನಡೆಸುವ ಸಾಧ್ಯತೆಗಳಿವೆ.
ಒಟ್ಟಿನಲ್ಲಿ ರಾಜ್ಯದಲ್ಲಿ ತಾಂಡವವಾಡುತ್ತಿರುವ ಭೀಕರ ಬರಗಾಲದ ನಡುವೆ ತಮಿಳುನಾಡಿಗೆ ನೀರು ಬೀಡುವ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ.