ಮುಲ್ಕಿ: ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಗುತ್ತಕಾಡು (ಶಾಂತಿನಗರ) ವಲಯ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆ ಹಾಗೂ ಇತರ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಗುತ್ತಕಾಡು ಶಾಂತಿನಗರದ ಗ್ರೀನ್ ಸ್ಟಾರ್ ಅಸೋಸಿಯೇಶನ್ ಕಚೇರಿಯಲ್ಲಿ ಮಾಹಿತಿ ಕೇಂದ್ರ ಉದ್ಘಾಟನಾ ಸಮಾರಂಭ ನಡೆಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾಹಿತಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಐದು ಮಹತ್ವಕಾಂಕ್ಷಿ ಯೋಜನೆಗಳು ಬಿಜೆಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಯೋಜನೆಗಳಿಗೆ ಅಡ್ಡಗಾಲು ಇಟ್ಟು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನು ಸರಕಾರದ ಯೋಜನೆಗಳನ್ನು ಉಚಿತವಾಗಿ ಪ್ರತಿ ಮನೆಗೆ ತಲುಪಿಸುವ ಕಾರ್ಯ ನಡೆಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ ಕೆಲಸವಾಗಿ ಮುಖ್ಯಮಂತ್ರಿಗಳ ಕೈ ಬಲಬಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೋಹನ್ ಕೋಟ್ಯಾನ್ ,ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ಕಿನ್ನಿಗೋಳಿ ಕಾಂಗ್ರೆಸ್ ಪ್ರಜಾಪ್ರತಿನಿಧಿ ಅಧ್ಯಕ್ಷ ಪ್ರಮೋದ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಟಿ.ಹೆಚ್. ಮಯ್ಯದ್ದಿ, ಟೀಕೆ ಅಬ್ದುಲ್ ಖಾದರ್, ಪ್ರಕಾಶ್ ಆಚಾರ್ಯ ಕಿನ್ನಿಗೋಳಿ ಉಪಸ್ಥಿತರಿದ್ದರು.