ಬೆಂಗಳೂರು:ಕುಂದಾಪುರದ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚೈತ್ರಾ ಕುಂದಾಪುರ ಬಳಿಯಿದ್ದ ನಗದು,ಚಿನ್ನಾಭರಣ ಸೇರಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಸಿಸಿಬಿ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಇದೇ ವೇಳೆ ಮತ್ತೊಬ್ಬ ಆರೋಪಿ ಉಡುಪಿ ಜಿಲ್ಲೆಯ ಬೈಂದೂರಿನ ಪ್ರಸಾದ್ ಬೈಂದೂರು ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಸರ್ಚ್ ವಾರಂಟ್ ಪಡೆದು ಶೋಧ ನಡೆಸಿದ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಉಡುಪಿಯ ಉಪ್ಪೂರು ಶ್ರೀರಾಮ ಸೊಸೈಟಿಯ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ 1.8 ಕೋಟಿ ರೂ. ಮೌಲ್ಯದ ಆಸ್ತಿ ಪತ್ರ, 40 ಲಕ್ಷ ನಗದು ಹಾಗೂ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪತ್ತೆಹಚ್ಚಿದ್ದಾರೆ. ಚೈತ್ರಾ ಸ್ನೇಹಿತ ಹಿರಿಯಡ್ಕ ಸಮೀಪದ ಪೆಲತ್ತೂರಿನ ಶ್ರೀಕಾಂತ್ ನಾಯಕ್ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಹಣ, ಚಿನ್ನ ಇಟ್ಟಿದ್ದಳು. ಗೆಳೆಯ ಶ್ರೀಕಾಂತ್ ನಾಯಕ್ ಹೆಸರಿನಲ್ಲಿ ಕಾರ್ಕಳದ ಕಣಜಾರಿನಲ್ಲಿ ಸೆಂಟ್ಸ್ ಗೆ 50 ಸಾವಿರ ರೂ. ನೀಡಿ, 20 ಸೆಂಟ್ಸ್ ಜಾಗ ಖರೀದಿಸಿ ಎರಡು ಅಂತಸ್ತಿನ ಮನೆ ಕಟ್ಟಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆಯೂ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಅಲ್ಲದೇ ಪ್ರಸಾದ್ ಬೈಂದೂರ್ ನನ್ನು ಎರಡು ದಿನದ ಹಿಂದೆ ವಿಚಾರಣೆ ನಡೆಸಿ ಕಳುಹಿಸಿದ್ದ ಸಿಸಿಬಿ ಪೊಲೀಸರು, ಆತನನ್ನು ಮತ್ತೆ ವಶಕ್ಕೆ ಪಡೆದು ಸ್ಥಳ ಮಹಜರು ನಡೆಸಿದ್ದಾರೆ.

ಬೆಂಗಳೂರಿನ ಮಂಗಮ್ಮನಪಾಳ್ಯದಲ್ಲಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಕಚೇರಿ, ಗೋವಿಂದರಾಜನಗರದಲ್ಲಿರುವ ಸ್ವಾಮೀಜಿ ನಿವಾಸ, ಕೆ.ಕೆ.ಗೆಸ್ಟ್ ಹೌಸ್‌ನ ಎರಡನೇ ಮಹಡಿಯಲ್ಲಿರುವ 207 ಸಂಖ್ಯೆಯ ರೂಮ್ ಅನ್ನು ಸಿಸಿಬಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ಟಿಕೆಟ್ ಕೊಡಿಸುವ ಕುರಿತು ಮೀಟಿಂಗ್ ನಡೆದಿದ್ದು, ಆರೋಪಿ ಗಗನ್ ಅಲ್ಲಿಂದಲೇ ಹಣ ತೆಗೆದುಕೊಂಡು ಹೋಗಿದ್ದ ಎನ್ನುವುದು ತನಿಖೆಯಿಂದ ಬಯಲಾದ ಹಿನ್ನೆಲೆಯಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಗೋವಿಂದರಾಜನಗರ ನಿವಾಸದಲ್ಲಿ ಸ್ವಾಮೀಜಿ 1.50 ಕೋಟಿ ರೂ. ಪಡೆದಿದ್ದರು ಎನ್ನಲಾಗಿದೆ. ಅಲ್ಲದೇ ಮತ್ತೊಬ್ಬ ಆರೋಪಿ ಚೆನ್ನಾ ನಾಯ್ಕ್ ಚುನಾವಣಾ ಸಮಿತಿ ಸದಸ್ಯ ಎಂದು ಇದೇ ಸ್ಥಳದಲ್ಲಿ ಭೇಟಿಯಾಗಿದ್ದ.ಈ ಹಿನ್ನೆಲೆಯಲ್ಲಿ ಮೂರು ಕಡೆಗಳಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.ಸ್ವಾಮೀಜಿ ನಿವಾಸ ಮತ್ತು ಮಠ ಸೇರಿ ಹಲವು ಕಡೆ ಮಹಜರು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚೈತ್ರಾ ಕುಂದಾಪುರ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಇಂದಿರಾ ಕ್ಯಾಂಟಿನ್ ಬಾಕಿ ಬಿಲ್ ಬಗ್ಗೆ ಸಿಸಿಬಿ ವಿಶೇಷ ತಂಡ ತನಿಖೆ ಕೈಗೊಂಡಿದೆ. ಸಿಸಿಬಿ ಕಚೇರಿಗೆ ವಿಚಾರಣೆಗೆ ಆಗಮಿಸಿದ ಸಂದರ್ಭದಲ್ಲಿ ಇಂದಿರಾ ಕ್ಯಾಂಟಿನ್ ಬಾಕಿ ಬಿಲ್ ಬಗ್ಗೆ ಚೈತ್ರಾ ಆರೋಪ ಮಾಡಿದ್ದರು. ಬಾಕಿ ಬಿಲ್ ಆರೋಪಕ್ಕೆ ಕುರಿತಂತೆ ಸಿಸಿಬಿ ವಿಶೇಷ ತಂಡ ರಚಿಸಿದ್ದು, ಮಾಹಿತಿ ಕಲೆ ಹಾಕಲು ಮುಂದಾದ ತಂಡ ಪಾಲಿಕೆಯ ಹಿರಿಯ ಅಧಿಕಾರಿಗಳ ಬಳಿ ಮಾಹಿತಿ ಸಂಗ್ರಹಿಸಿದೆ. ಜತೆಗೆ ಇಂದಿರಾ ಕ್ಯಾಂಟಿನ್ ಬಿಲ್ ಬಿಡುಗಡೆ ಮಾಡುವ ಅಧಿಕಾರಿಗಳ ಕಾಲ್ ಡೀಟೈಲ್ಸ್ ಕೂಡ ಕಲೆ ಹಾಕಿದ್ದಾರೆ. ಗೋವಿಂದಬಾಬು ಪೂಜಾರಿಗೆ ಸೇರಿದ ಕ್ಯಾಂಟಿನ್ ವ್ಯವಹಾರಗಳ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಗೋವಿಂದಬಾಬು ಎಷ್ಟು ವರ್ಷಗಳಿಂದ ಕ್ಯಾಂಟಿನ್‌ಗಳಿಗೆ ಊಟ ಸರಬರಾಜು ಮಾಡುತ್ತಿದ್ದಾರೆ. ಈವರೆಗೆ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ ಕಳೆದ ಎರಡು ವರ್ಷಗಳಿಂದ ಎಷ್ಟು ಹಣ ಬಾಕಿ ನೀಡಬೇಕಿತ್ತು. ಮೂರು ತಿಂಗಳಲ್ಲಿ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ ಸೇರಿ ಕ್ಯಾಂಟಿನ್‌ಗೆ ಸಂಬಂಧಿಸಿದಂತೆ ಹಲವಾರು ವಿಷಯಗಳ ಬಗ್ಗೆ ಸಿಸಿಬಿ ಅಧಿಕಾರಿಗಳು ಬಿಬಿಎಂಪಿ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದಿದ್ದಾರೆ
ಒಟ್ಟಿನಲ್ಲಿ ಚೈತ್ರಾಳ ಅಕ್ರಮ ಹಣ ಗಳಿಕೆಯ ಜಾಲ ಬಗೆದಷ್ಟು ಹೊರಬರುತ್ತಿದ್ದು ಆಕೆಯ ಇನ್ನಷ್ಟು ಅಕ್ರಮ ಹೊರಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ



