ಮಂಗಳೂರು: ಕಳೆದ ವರ್ಷ ಮಂಗಳೂರಿನ ಕಂಕನಾಡಿಯ ನಾಗುರಿಯಲ್ಲಿ ಚಲಿಸುತ್ತಿದ್ದ ರಿಕ್ಷಾದಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ವಿಶೇಷ ನ್ಯಾಯಾಲಯಕ್ಕೆ ಆರೋಪ ಚಾರ್ಜ್ ಶೀಟ್ ಸಲ್ಲಿಸಿದೆ. ದೇವಾಲಯದ ಮೇಲಿನ ದಾಳಿ ಯತ್ನವು ಐಸಿಸ್ ಪ್ರೇರಿತವಾಗಿದೆ ಎಂದು ಎನ್ ಐ ಎ ವರದಿಯಲ್ಲಿ ಉಲ್ಲೇಖಿಸಲಾಗಿದೆ
ಮಂಗಳೂರಿನ ಕದ್ರಿ ದೇವಸ್ಥಾನವನ್ನು ಸ್ಪೋಟಿಸುವುದೇ ಆರೋಪಿಗಳ ಪ್ರಮುಖ ಗುರಿಯಾಗಿತ್ತು. ಷರಿಯತ್ ಕಾನೂನಿಗೆ ಮತ್ತಷ್ಟು ಪ್ರಚಾರ ನೀಡುವ ಉದ್ದೇಶ ಹೊಂದಿದ್ದ ಆರೋಪಿಗಳು, ಈ ದಾಳಿ ಯಶಸ್ವಿಯಾಗಿದ್ದರೆ ಐಸಿಸ್ ಸೇರುವ ಯೋಜನೆ ರೂಪಿಸಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ನ.೧೯, ೨೦೨೨ರಂದು ನಗರದಲ್ಲಿ ಕುಕ್ಕರ್ ಬಾಂಬ್ ಸ್ಪೋಟಗೊಂಡು ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಮಂಗಳೂರಿನಲ್ಲಿ ೨೦೨೦ರಲ್ಲಿ ಕಂಡು ಬಂದ ಉಗ್ರ ಗೋಡೆ ಬರಹ ಪ್ರಕರಣದ ಹಾಗೂ ಶಿವಮೊಗ್ಗ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಮ್ಮದ್ ಶಾರೀಕ್ ಕುಕ್ಕರ್ ಬಾಂಬ್ ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದಾಗಲೇ ಸ್ಪೋಟಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಈ ಸ್ಫೋಟದಿಂದ ರಾಜ್ಯದಲ್ಲಿ ಐಸಿಸ್ ಮಾದರಿ ಕೃತ್ಯಕ್ಕೆ ಸಂಚು ರೂಪಿಸಿದ ವಿಚಾರ ಬಯಲಾಗಿತ್ತು. ಈ ಘಟನೆಯಲ್ಲಿ ಆಟೋ ಚಾಲಕ ಪುರುಷೋತ್ತಮ ಕೂಡ ಗಾಯಗೊಂಡಿದ್ದರು. ಈ ತನಿಖೆ ನಡೆಸಿದ್ದಂತ ಎನ್ಐಎ ಪ್ರಮುಖ ಆರೋಪಿಗಳಾದ ಮೊಹಮ್ಮದ್ ಶಾರೀಕ್ ಹಾಗೂ ಸಯ್ಯದ್ ಯಾಸೀನ್ ವಿರುದ್ಧ ಈಗ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.
ಕುಕ್ಕರ್ ಬಾಂಬ್ ಸ್ಪೋಟದ ಬಳಿಕ ಬಹುತೇಕ ಪ್ರಮುಖ ಹಿಂದೂ ದೇವಾಲಯಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ,ಜನರ ಚಲನವಲನಗಳ ಮೇಲೆ ನಿಗಾ ಇಡುವ ಮೂಲಕ ಭದ್ರತೆಯನ್ನು ಹೆಚ್ಚಿಸಲಾಗಿದೆ.