ಕಾರ್ಕಳ: ಸಾಮಾಜಿಕ ಸಾಮರಸ್ಯದೊಂದಿಗೆ ಬಡವರಿಗೆ ಬದುಕು ಕಟ್ಟಿಕೊಡುವುದೆ ಕಾಂಗ್ರೆಸ್ ಪಕ್ಷದ ಗುರಿ. ಗೃಹಲಕ್ಷ್ಮಿ ಯೋಜನೆಯ 1.23 ಕೋಟಿ ಫಲಾನುಭವಿಗಳಲ್ಲಿ ಅರ್ಜಿಗಳ ದಾವಂತದ ಒತ್ತಡದ ಹೊರತಾಗಿಯೂ ಈಗಾಗಲೇ 98 ಲಕ್ಷ ಕುಟುಂಬಗಳಿಗೆ ಈ ಯೋಜನೆ ತಲಪಿದೆ. ಮುಂದಿನ ತಿಂಗಳೊಳಗೆ ಯೋಜನೆ ಎಲ್ಲ ಕುಟುಂಬಗಳಿಗೆ ತಲಪಲಿದ್ದು ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಮಟ್ಟದಲ್ಲಿ ಸರ್ವೆಕಾರ್ಯ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಶೆಟ್ಟ ಹೇಳಿದರು..
ಅವರು ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊಸನೊಟ್ಟಿನಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕುಕ್ಕುಂದೂರು ಗ್ರಾಮ ಸಮಿತಿ ಆಯೋಜಿಸಿದ್ದ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಉಪಾದ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತಾಡಿದರು.
ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸುವ ನಿಟ್ಟಿನಲ್ಲಿ ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಮುಂದಿನ ಗುರಿಯಾಗಿದೆ. ಸ್ಥಳೀಯರ ಮತ್ತು ಕಾರ್ಯಕರ್ತರ ಸಮಸ್ಯೆಗಳಿಗೆ ಪಕ್ಷದ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂದ ಅವರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಮಾತನಾಡಿ, ಸಮಾಜವನ್ನು ಒಡೆದು ಆಳಿ ಧರ್ಮದ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿಯ ಕಾಲ ಮುಗಿದಿದೆ ಎಂದು ಭ್ರಮಿಸಲಾಗದು. ಮುಂದಿನ ತಾಪಂ, ಜಿಪಂ ಚುನಾವಣೆಯ ಅಗ್ನಿಪರೀಕ್ಷೆ ನಮ್ಮ ಮುಂದಿದ್ದು ಅದರಲ್ಲಿ ಗೆಲುವು ಸಾಧಿಸುವುದು ನಮ್ಮ ಗುರಿಯಾಗಬೇಕು ಎಂದರು.
ಗ್ರಾಮ ಸಮಿತಿ ಅಧ್ಯಕ್ಷ ಥೋಮಸ್ ಮಸ್ಕರೇನಸ್ ಸಮಾರಂಭದ ಅಧ್ಯಕ್ಷತೆ ವಹಿಸಿ ಗ್ರಾಮ ಸಮಿತಿಯ ಸಾದನೆಗಳನ್ನು ಸಭೆಯ ಮುಂದಿಟ್ಟರು. ಬ್ಲಾಕ್ ಉಪಾಧ್ಯಕ್ಷ ಜೋರ್ಜ್ ಕ್ಯಾಸ್ತಲೀನೋ ಅಭಿನಂದನಾ ಭಾಷಣ ಮಾಡಿ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿದ ಉಷಾ.ಕೆ ಮತ್ತು ಶಶಿ ಸಂತೋಷ್ ಮಾತನಾಡಿ ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ದೀಪಾಕ್ಷಿ, ಯುವನಾಯಕ ಸೂರಜ್ ನಾಯಕ್, ಪಂಚಾಯತ್ ಸದಸ್ಯರಾದ ರೀನಾ ಟೀಚರ್, ವಿಶ್ವನಾಥ ಭಂಡಾರಿ, ಮಾಜಿ ಸದಸ್ಯೆ ವಿನ್ನಿ ಡಿ’ಸೋಜ, ದಯಾನಂದ ಶೆಟ್ಟಿ, ದಯಾನಂದ ಭಂಡಾರಿ ಸತೀಷ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷ ಅಣ್ಣಪ್ಪ ನಕ್ರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಬೈಲೂರು ಪ್ರಸ್ತಾವನೆಗೈದು ವಂದಿಸಿದರು.