ಹೆಬ್ರಿ : ತಾಲೂಕಿನ ಕುಚ್ಚೂರಿನಲ್ಲಿ 27ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ವೈಭವದಿಂದ ನಡೆಯಿತು.
ಗಣಪತಿ ಪ್ರತಿಷ್ಠಾಪನೆ, ಗಣಹೋಮ, ಮೂಡುಗಣಪತಿ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಸಭಾ ಕಾರ್ಯಕ್ರಮದಲ್ಲಿ ಕುಚ್ಚೂರು ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಹರಿದಾಸ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಕುಚ್ಚೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಅಮೃತ ಭಾರತಿ ವಿದ್ಯಾಲಯದ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಧಾರ್ಮಿಕ ಉಪನ್ಯಾಸ ನೀಡಿ, ಭಾರತೀಯ ಸನಾತನ ಧರ್ಮದ ದ್ಯೋತಕವೇ ಧಾರ್ಮಿಕ ಹಬ್ಬಗಳು, ಈ ಹಬ್ಬಗಳ ಆಚರಣೆಯ ಸಂದೇಶವನ್ನು ನಾವೆಲ್ಲರೂ ಅಧ್ಯಯನ ಮಾಡಬೇಕು. ಗಣಪತಿಯು ಕೇವಲ ವಿಘ್ನ ನಿವಾರಕನಲ್ಲ, ದುಷ್ಟರಿಗೆ ವಿಘ್ನಕಾರಕನಾಗಿದ್ದಾನೆ. ಅವನ ಕೈಯಲ್ಲಿ ಧರಿಸಿರುವ ಆಯುಧಗಳಿಂದಲೇ ತಿಳಿಯಬೇಕು. ಹಾಗಾಗಿ ಧರ್ಮ ವಿರೋಧಿಗಳಾಗಬಾರದು ಎಂದರು.

ಈ ಸಂದರ್ಭದಲ್ಲಿ ಕುಚ್ಚೂರು ಶಾಲಾ ಮುಖ್ಯ ಶಿಕ್ಷಕಿ ಗಂಗಮ್ಮ, ಕಾರ್ಯಕಾರಿ ಸಮಿತಿ ಅಧ್ಯಕ್ಷ ಶರತ್ ಶೆಟ್ಟಿ, ಕಾರ್ಯದರ್ಶಿ ದೀಪಕ್ ಪೂಜಾರಿ, ಕೋಶಾಧಿಕಾರಿ ವಿಜಯ ಪೂಜಾರಿ, ಹರಿದಾಸ ಶೆಟ್ಟಿ, ಮಹಿಳಾ ಕ್ರೀಡಾ ಕಾರ್ಯದರ್ಶಿ ಸುಜಾತಾ ಶೆಟ್ಟಿ, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕ ಮಂಜುನಾಥ ಶೆಟ್ಟಿ ನಿರೂಪಿಸಿದರು.
















