ಉತ್ತರ ಕನ್ನಡ : ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಮಹಿಳೆಯೊಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹೆಡ್ ಬಂದರ್ ಬಳಿ ಶನಿವಾರ ಸಂಜೆ ನಡೆದಿದೆ.
ನಿವೇದಿತಾ ನಾಗರಾಜ ಭಂಡಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕಣ್ಮರೆಯಾಗಿರುವ ಸಾಂತಗಲ್ ಗ್ರಾಮದ ನಿವಾಸಿಯಾಗಿರುವ ನಿವೇದಿತಾ, ನಿನ್ನೆ ಸಂಜೆ ಮನೆಯಿಂದ ಇಬ್ಬರು ಗಂಡುಮಕ್ಕಳನ್ನು ಸ್ಕೂಟಿಯ ಹಿಂದೆ ಕೂಡಿಸಿಕೊಂಡು ಕುಮಟಾದ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ನಿಲ್ದಾಣಕ್ಕೆ ಬಂದ ಬಳಿಕ ಮಕ್ಕಳಿಬ್ಬರನ್ನು ನಿಲ್ದಾಣದಲ್ಲೇ ಕೂರುವಂತೆ ತಿಳಿಸಿ ಸಮುದ್ರಕಡೆ ತೆರಳಿದ್ದ ನಿವೇದಿತಾ.ಆತ್ಮಹತ್ಯೆಗೆ ಮುನ್ನ ಸ್ಕೂಟಿಯ ಹಿಂಬದಿ ಸೀಟಿನ ಡಿಕ್ಕಿಯಲ್ಲಿ ಮಾಂಗಲ್ಯ, ಕಾಲುಂಗುರ, ಮೊಬೈಲ್ ಫೋನ್ ಇಟ್ಟು ಸಮುದ್ರಕ್ಕೆ ಹಾರಿದ್ದಾರೆ. ನಿವೇದಿತಾ ಸಮುದ್ರಕ್ಕೆ ಹಾರುವುದನ್ನ ಗಮನಿಸಿ ಲೈಫ್ ಗಾರ್ಡ್ ರಕ್ಷಣೆಗೆ ಮುಂದಾಗಿದ್ದು, ಆದರೆ ಬೃಹತ್ ಅಲೆಗಳ ಅಬ್ಬರಕ್ಕೆ ಮಹಿಳೆ ಕೊಚ್ಚಿ ಹೋಗಿ ಕಣ್ಮರೆಯಾಗಿದ್ದಾರೆ.
ಘಟನೆ ಬಳಿಕ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿದ್ದಾರೆ. ಲೈಫ್ ಗಾರ್ಡ್ ಈಜುಪಟುಗಳ ಸಹಾಯದಿಂದ ಹುಡುಕಾಟ ಮುಂದುವರಿಸಿದ್ದಾರೆ.
ನಿವೇದಿತಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.