ಮೈಸೂರು : ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ ಇಂದು ಬೆಳಗಿನ ಜಾವ ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಧ್ರುವನಾರಾಯಣರಿಗೆ ಹಠಾತ್ ಹೃದಯಾಘಾತ ಸಂಭವಿಸಿದ ಕೂಡಲೇ ಅವರನ್ನು ಮೈಸೂರಿನ ಡಿಆರ್ಎಂಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಧ್ರುವನಾರಾಯಣರಿಗೆ ಬೆಳಗಿನ ಜಾವ 6.30ಕ್ಕೆ ಎದೆ ನೋವು ಕಾಣಿಸಿಕೊಂಡಿದೆ. ಬಳಿಕ ಧ್ರುವನಾರಾಯಣರನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವ ವೇಳೆ ಎದೆಉರಿಯಿಂದ ಹೃದಯದಲ್ಲಿ ಬ್ಲಡ್ ಬ್ಲೀಡಿಂಗ್ ಆಗಿ 7 ಗಂಟೆಗೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಧ್ರುವನಾರಾಯಣ ಕೊನೆಯುಸಿರೆಳೆದಿದ್ದಾರೆ. ಇಂದೇ ಧ್ರುವನಾರಾಯಣ ಅಂತ್ಯ ಸಂಸ್ಕಾರ ಅವರ ಹುಟ್ಟೂರಿನಲ್ಲಿ ನಡೆಯಲಿದೆ.
ಮಂಡ್ಯ ಕಾಂಗ್ರೆಸ್ ಉಸ್ತುವಾರಿ ಆಗಿರುವ ಧ್ರುವನಾರಾಯಣ ನಿಧನದ ಹಿನ್ನಲೆಯಲ್ಲಿ ರಾಮನಗರದಲ್ಲಿ ಇಂದು ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
















