ಮುಲ್ಕಿ: ತಾಲೂಕು ವ್ಯಾಪ್ತಿಯ ಕೆಮ್ರಾಲ್ ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಯ್ಯದ್ದಿ ಪಕ್ಷಿಕೆರೆ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶೋಭಾ ಆಯ್ಕೆಯಾಗಿದ್ದಾರೆ.
ಕೆಮ್ರಾಲ್ ಪಂಚಾಯತ್ ನಲ್ಲಿ 10 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ 7 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಇದ್ದು ಅಧ್ಯಕ್ಷ ಹುದ್ದೆಗೆ ಹಿಂದುಳಿದ ವರ್ಗ (ಅ )ಮೀಸಲಾತಿ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಯ್ಯದ್ದಿ ರವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಾಲತಿ ರವರನ್ನು 11-6 ಮತಗಳಿಂದ ಸೋಲಿಸಿ ವಿಜಯಿಯಾಗಿದ್ದಾರೆ. ವಿಶೇಷವೆಂದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯೊಬ್ಬರು ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಅಭ್ಯರ್ಥಿಗೆ ಮತ ಹಾಕಿದ್ದಾರೆ.
ಉಪಾಧ್ಯಕ್ಷ ಹುದ್ದೆ ಎಸ್ಸಿ ಪಂಗಡಕ್ಕೆ ಮೀಸಲಿಟ್ಟಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಾರೂ ಇಲ್ಲದ ಕಾರಣ ಬಿಜೆಪಿ ಬೆಂಬಲಿತ ಸದಸ್ಯೆ ಶೋಭಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ವಯಸ್ಕರ ಶಿಕ್ಷಣಾಧಿಕಾರಿ ಲೋಕೇಶ್ ಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜಾ, ಕಾರ್ಯದರ್ಶಿ ಕೇಶವ ದೇವಾಡಿಗ ಸಹಕರಿಸಿದ್ದರು.




