ಕಾರ್ಕಳ :ಅಕ್ರಮವಾಗಿ ದನಗಳನ್ನು ಕದ್ದು ವಾಹನದಲ್ಲಿ ತುಂಬಿಸಿಕೊಂಡು ಪರಾರಿಯಾಗುತ್ತಿದ್ದ ವಾಹನವನ್ನು ಬಜರಂಗದಳದ ಕಾರ್ಯಕರ್ತರು ಬೆನ್ನಟ್ಟಿ ಗೋವುಗಳನ್ನು ರಕ್ಷಿಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಫರಂಗಿಪೇಟೆ ನಿವಾಸಿಗಳಾದ ಜಬ್ಬರ್(24), ಹೈದರಾಲಿ(26), ಕಾರ್ಕಳ ತಾಲೂಕು ಶಿರ್ಲಾಲು ಗ್ರಾಮದ ಪ್ರಸಾದ್ ಪೂಜಾರಿ(23ವ) ಹಾಗೂ ಜಗನ್ನಾಥ ಶೆಟ್ಟಿ(58) ಬಂಧಿತ ಆರೋಪಿಗಳು.
ಕಾರ್ಕಳ ತಾಲೂಕಿನ ಕೆರ್ವಾಶೆ ಎಂಬಲ್ಲಿ ಭಾನುವಾರ ರಾತ್ರಿ ನಾಲ್ಕು ಜಾನುವಾರುಗಳನ್ನು ನಂಬರ್ ಪ್ಲೇಟ್ ಇಲ್ಲದ ಸ್ಕಾರ್ಪಿಯೋ ವಾಹನದಲ್ಲಿ ಕೈಕಾಲು ಕಟ್ಟಿ ಅಮಾನುಷ ರೀತಿಯಲ್ಲಿ ತುಂಬಿಸಿಕೊಂಡು ಬಜಗೋಳಿ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬಜರಂಗದಳ ಕಾರ್ಯಕರ್ತರು ಅನುಮಾನಗೊಂಡು ಸ್ಕಾರ್ಪಿಯೋ ವಾಹನವನ್ನು ಬೆನ್ನಟ್ಟಿದ್ದರು. ಇದರಿಂದ ಭಯಭೀತರಾದ ದುಷ್ಕರ್ಮಿಗಳು ಗೋಸಾಗಾಟ ಮಾಡುತ್ತಿದ್ದ ಸ್ಕಾರ್ಪಿಯೋವನ್ನು ಬಜಗೋಳಿಯಲ್ಲಿ ಬಿಟ್ಟು ಪರಾರಿಯಾಗಿದ್ದರು.
ಘಟನೆಯ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಜಾನುವಾರುಗಳನ್ನು ರಕ್ಷಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ವೃತ್ತ ನಿರೀಕ್ಷಕ ಟಿ.ಡಿ ನಾಗರಾಜ್, ಗ್ರಾಮಾಂತರ ಠಾಣಾ ಪಿಎಸ್‌ಐ ದಿಲೀಪ್ ನೇತೃತ್ವದ ಪೊಲೀಸರ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.