ನವದೆಹಲಿ : ನಿಷ್ಕ್ರಿಯಗೊಂಡ ಬಾಹ್ಯಾಕಾಶ ನೌಕೆಯೊಂದು ಕೆಲ ವಾರಗಳಲ್ಲಿ ಭೂಮಿಗೆ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. 1.3 ಟನ್ ತೂಕದ ಅಯೋಲಸ್ ಉಪಗ್ರಹದ ಇಂಧನ ಖಾಲಿಯಾಗಿದ್ದು ಮತ್ತು ಅದು ಭೂಮಿಯ ಕಡೆಗೆ ಬೀಳುತ್ತಿದೆ. ಆದರೆ ಈ ಬಾಹ್ಯಾಕಾಶ ನೌಕೆ ಭೂಮಿಗೆ ಬೀಳುವ ನಿಖರವಾದ ಸಮಯವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದೂ ಬಾಹ್ಯಾಕಾಶ ಸಂಸ್ಥೆ ಹೇಳಿದೆ.
ಹೆಚ್ಚಿನ ಅಯೋಲಸ್ ಉಪಗ್ರಹದ ಭಾಗಗಳು ವಾತಾವರಣದಲ್ಲಿ ಸುಟ್ಟುಹೋಗುತ್ತದೆ. ಆದರೆ ಕೆಲವು ಅವಶೇಷಗಳು ಜುಲೈ ಅಂತ್ಯದಲ್ಲಿ ಅಥವಾ ಆಗಸ್ಟ್ ಆರಂಭದಲ್ಲಿ ಭೂಮಿಯ ಮೇಲ್ಮೈಯನ್ನು ತಲುಪಬಹುದು. ಈ ಉಪಗ್ರಹದ ಇಂಧನ ಖಾಲಿಯಾಗುತ್ತಿದ್ದು ದಿನಕ್ಕೆ 1 ಕಿಮೀ ನಷ್ಟು ವೇಗದಲ್ಲಿ ಭೂಮಿಯ ಕಡೆಗೆ ಬೀಳುತ್ತಿದೆ. ಈ ಹಿನ್ನೆಲೆ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಬಾಹ್ಯಾಕಾಶ ನೌಕೆಯನ್ನು ಅದರ ಉಪಗ್ರಹದಲ್ಲಿ ಉಳಿದಿರುವ ಇಂಧನವನ್ನು ಬಳಸಿಕೊಂಡು ಅದನ್ನು ದೂರದ ಪ್ರದೇಶದ ಕಡೆಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದೆ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ.
ಉಪಗ್ರಹ ಅಯೋಲಸ್ 5 ವರ್ಷಗಳ ಕಾಲ 320 ಕಿಮೀ ಎತ್ತರದಲ್ಲಿ ಭೂಮಿಯ ಕಕ್ಷೆಯಲ್ಲಿ ಸುತ್ತಿದೆ. ಹವಾಮಾನ ಮುನ್ಸೂಚನೆಗಳನ್ನು ಸುಧಾರಿಸಲು ಅಯೋಲಸ್ ವಾತಾವರಣದಲ್ಲಿ ಗಾಳಿಯನ್ನು ಅಳೆಯುತ್ತಿತ್ತು. ಆದರೂ, ಅದರ ಇಂಧನವು ಬಹುತೇಕ ಖರ್ಚಾಗಿದೆ ಮತ್ತು ಭೂಮಿಯ ಗುರುತ್ವಾಕರ್ಷಣೆ ಹಾಗೂ ಸೌರ ಚಟುವಟಿಕೆಯ ಕಾರಣದಿಂದಾಗಿ ಭೂಮಿಯ ವಾತಾವರಣವು ಬಾಹ್ಯಾಕಾಶ ನೌಕೆಯನ್ನು ಕೆಳಕ್ಕೆ ಎಳೆಯುತ್ತಿದೆ ಎಂದು ತಿಳಿದುಬಂದಿದೆ ಎಂದೂ ಸ್ಕೈ ನ್ಯೂಸ್ ವರದಿ ಹೇಳಿದೆ