ಬೆಂಗಳೂರು: ನೈಸರ್ಗಿಕ ಅನಿಲ ಉತ್ಪನ್ನಗಳಾದ ಸಿಎನ್ಜಿ ಮತ್ತು ಪಿಎನ್ಜಿ ಗ್ಯಾಸ್ಗಳ ಬೆಲೆ ದೇಶಾದ್ಯಂತ ಕಡಿಮೆ ಆಗಿದೆ. ನ್ಯಾಚುರಲ್ ಗ್ಯಾಸ್ನ ಬೆಲೆ ನಿಗದಿ ಮಾಡಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ರೂಪಿಸಿದೆ.
ನಿನ್ನೆ ಏಪ್ರಿಲ್ 7ರಂದು ಕೇಂದ್ರ ಸಂಪುಟ ಈ ಮಾರ್ಗಸೂಚಿಗೆ ಅನುಮೋದನೆಯನ್ನೂ ಕೊಟ್ಟಿದೆ. ಇಂದು ಶನಿವಾರದಿಂದ ದೇಶದ ವಿವಿಧೆಡೆ ವಿವಿಧ ಪ್ರಮಾಣದಲ್ಲಿ ಸಿಎನ್ಜಿ ಮತ್ತು ಪಿಎನ್ಜಿ ಗ್ಯಾಸ್ ಬೆಲೆಗಳು ಇಳಿಕೆ ಕಂಡಿವೆ. ಸಿಎನ್ಜಿ ಗ್ಯಾಸ್ನ ಬೆಲೆ ಶೇ. 6ರಿಂದ 9ರಷ್ಟು ಕಡಿಮೆ ಆದರೆ, ಕೊಳವೆ ಅನಿಲದ (ಪಿಎನ್ಜಿ) ಬೆಲೆ ಶೇ. 10ರಷ್ಟು ಕಡಿಮೆ ಆಗಿದೆ. ಇದರೊಂದಿಗೆ ಬೆಲೆ ಏರಿಕೆಯ ಬಿಸಿಯಲ್ಲಿರುವ ಜನಸಾಮಾನ್ಯರು ಸ್ವಲ್ಪಮಟ್ಟಿದಾದರೂ ನಿಟ್ಟುಸಿರು ಬಿಡುವಂತಾಗಿದೆ. ಹಾಗೆಯೇ ಬಹಳ ವ್ಯಾಪಕವಾಗಿ ಬಳಕೆಯಲ್ಲಿರುವ ಎಲ್ಪಿಜಿ ಗ್ಯಾಸ್ಗಳ ಬೆಲೆಯೂ ಮುಂದಿನ ದಿನಗಳಲ್ಲಿ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನೈಸರ್ಗಿಕ ಅನಿಲವನ್ನು ಭಾರತದ ತೈಲ ನಿಕ್ಷೇಪಗಳಿಂದ ಉತ್ಪಾದನೆ ಮಾಡಲಾಗುತ್ತದೆ. ಈ ಮುಂಚೆ ಇವುಗಳ ಬೆಲೆಯನ್ನು ಅಮೆರಿಕ, ಕೆನಡಾ, ರಷ್ಯಾ ಇತ್ಯಾದಿ ಮಾರುಕಟ್ಟೆಗಳ ಗ್ಯಾಸ್ ಹಬ್ಗಳಲ್ಲಿನ ಬೆಲೆಗೆ ಜೋಡಿಸಲಾಗಿತ್ತು. ಈಗ ಇವುಗಳ ಬದಲು ಕಚ್ಛಾ ತೈಲ ಬೆಲೆಗೆ ದೇಶೀಯ ನೈಸರ್ಗಿಕ ಅನಿಲದ ಬೆಲೆಯನ್ನು ಲಿಂಕ್ ಮಾಡಲಾಗಿದೆ.
ಭಾರತದ ಪೆಟ್ರೋಲಿಯಂ ರಿಫೈನಿಂಗ್ ಕಂಪನಿಗಳು ಒಂದು ತಿಂಗಳಲ್ಲಿ ಆಮದು ಮಾಡಿಕೊಳ್ಳಲಾದ ವಿವಿಧ ಕಚ್ಛಾ ತೈಲಗಳ ಸರಾಸರಿ ಬೆಲೆಯಲ್ಲಿ ಶೇ. 10ರಷ್ಟು ದರವನ್ನು ನೈಸರ್ಗಿಕ ಅನಿಲಕ್ಕೆ ನಿಗದಿ ಮಾಡಲಾಗಿದೆ. ಈಗಿರುವ ದರಕ್ಕಿಂತ ಶೇ. 24ರಷ್ಟು ಕಡಿಮೆ ದರವನ್ನು ಗರಿಷ್ಠ ದರ ಎಂದೂ ನಿಗದಿ ಮಾಡಲಾಗಿದೆ. ಈ ಸೂತ್ರಕ್ಕೆ ಕೇಂದ್ರ ಸಂಪುಟ ಅನುಮೋದನೆ ಕೊಟ್ಟಿದ್ದು, ಏಪ್ರಿಲ್ 8ರಿಂದ ಜಾರಿಯಾಗಿದೆ.